ಅಂಕೋಲಾ: ಉತ್ತರ ಕನ್ನಡ ಜಿಲ್ಲೆ ವಿಸ್ತೀರ್ಣದಲ್ಲಿ ಬಹು ದೊಡ್ಡದಾಗಿದ್ದು, ಪಶ್ಚಿಮ ಘಟ್ಟಗಳು ಮತ್ತು ಕರಾವಳಿ ಭಾಗಗಳನ್ನು ಹೊಂದಿದೆ. ಯೋಜನೆಗಳಿಗೆ ಬಲಿಯಾಗುತ್ತಿರುವುದು ಕರಾವಳಿ ಭಾಗ ಮಾತ್ರ. ಇಲ್ಲಿ ಸ್ಥಾಪಿತವಾದ ನೌಕಾನೆಲೆ, ಕೈಗಾ ಅಣುಸ್ಥಾವರ, ಚತುಷ್ಪಥ ಹೆದ್ದಾರಿ, ವಿಮಾನ ನಿಲ್ದಾಣಕ್ಕೆ ಭೂಮಿಯನ್ನ ಕಳೆದುಕೊಂಡ ಇಲ್ಲಿಯ ಸಾವಿರಾರು ಜನ ನೋವಿನಲ್ಲಿ ಬದುಕುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಭೂಮಿಯನ್ನ ಘಟ್ಟದ ಕೆಳಗಿನ ತಾಲೂಕಿನಲ್ಲೇ ಅತೀ ಹೆಚ್ಚಿನ ಯೋಜನೆಗಳಿಂದ ಭೂಮಿ ಕಳೆದುಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಘಟ್ಟದ ಮೇಲಿನ ಯಾವ ತಾಲೂಕುಗಳಲ್ಲಿಯೂ ಜನರಿಗೆ ಸಂಕಷ್ಟಕ್ಕೆ ನೂಕುವ ಯೋಜನೆಗಳು ಬರಲು ಅಲ್ಲಿನ ಘಟಾನುಘಟಿ ನಾಯಕರು ಬಿಡುವುದಿಲ್ಲ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯನ್ನು ವಿಭಜಿಸಿ ಕರಾವಳಿಗರಿಗೆ ನ್ಯಾಯ ದೊರಕುವಂತಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಸುನೀಲ್ ನಾಯ್ಕ ಹೊನ್ನೆಕೇರಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಘಟಾನುಘಟಿ ನಾಯಕರಿದ್ದು ಅವರಲ್ಲಿ ಆರ್ ವಿ ದೇಶಪಾಂಡೆ,ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ,ಶಿವರಾಮ್ ಹೆಬ್ಬಾರ್,ಭೀಮಣ್ಣ ನಾಯ್ಕರಂತಹ ನಾಯಕರು ಘಟ್ಟದ ಮೇಲಿನವರಾಗಿದ್ದರಿಂದ ಕರಾವಳಿ ಬಾಗಕ್ಕೆ ಮೋಸವಾಗುತ್ತಿದೆ, ಇವರೆಲ್ಲರು ಘಟ್ಟದ ಮೇಲಿನ ಭಾಗದ ಬಗ್ಗೆಯಷ್ಟೇ ಕಾಳಜಿಯನ್ನು ಹೊಂದಿದವರಂತೆ ಕಂಡುಬರುತ್ತಿದೆ, ಘಟ್ಟದ ಕೆಳಗಿನ ಭಾಗದಲ್ಲಿ ಸದೃಢವಾಗಿ ಸರಕಾರಕ್ಕೆ ತಾಕೀತು ಮಾಡುವ ನಾಯಕರಿಲ್ಲದ ಕಾರಣ ಇಲ್ಲಿಯ ಭಾಗವು ಯೋಜನೆಗಳಿಗೆ ಮಾತ್ರ ಮೀಸಲಾಗುತ್ತಿದ್ದು ಇದರಿಂದ ಕರಾವಳಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಈ ಹಿಂದಿನಿಂದಲೂ ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆಯ ಬೇಡಿಕೆಗಳನ್ನು ಇಲ್ಲಿಯ ಜನರು ಹಲವಾರುಬಾರಿ ವ್ಯಕ್ತಪಡಿಸಿದ್ದರು, ಸರಕಾರ ಉತ್ತರಕನ್ನಡ ಜಿಲ್ಲೆಗೆ ಸುಸಜ್ಜಿತ ಅಸ್ಪತ್ರೆಯನ್ನು ನೀಡಿದರೆ ಅದನ್ನು ಈ ಘಟಾನುಘಟಿ ನಾಯಕರು ಘಟ್ಟದಮೇಲಿನ ಪ್ರದೇಶಕ್ಕೆ ತೆಗೆದುಕೊಂಡು ಹೋಗುವುದಂತೂ ಖಂಡಿತ ಆದ್ದರಿಂದ ಜಿಲ್ಲೆಯ ಇಬ್ಬಾಗವಾದಲ್ಲಿ ನಮ್ಮ ಕರಾವಳಿ ಭಾಗಕ್ಕೆ ನ್ಯಾಯ ದೊರಕುವಂತಾಗಲಿದೆ ಎಂದರು. ಕರಾವಳಿ ಭಾಗವು ಜಿಲ್ಲೆಯಾಗಿ ಘೋಷಣೆಯಾದಲ್ಲಿ ಅಂಕೋಲಾ-ಕಾರವಾರ ಶಾಸಕಿ ರೂಪಾಲಿ ನಾಯ್ಕರಂತವರು ಉಸ್ತುವಾರಿ ಸಚಿವರಾದಲ್ಲಿ ಜಿಲ್ಲೆಯನ್ನು ಸಮರ್ಥವಾಗಿ ನಿಬಾಯಿಸಿಕೊಂಡು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವವುದಂತೂ ಖಚಿತವಾಗಿದೆ ಆ ನಿಟ್ಟಿನಲ್ಲಿ ನಮ್ಮ ಹೋರಾಟ ಇಂದಿನಿ0ದ ಮುಂದುವರೆಯಲಿದ್ದು ಕರಾವಳಿ ಬಾಗಗಳ ತಾಲೂಕುಗಳಲ್ಲಿ ನಮ್ಮ ಸಂಘಟನೆಯು ಪ್ರಾರಂಭವಾಗಲಿದ್ದು ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪ್ರಸನ್ನ ನಾಯ್ಕ, ರತ್ನಾಕರ ಗೌಡ, ಮಾಹಾದೇವ ಬೇಲಿಪ್, ಪ್ರಶಾಂತ್ ನಾಯ್ಕ, ಸಂದೀಪ್ ಸುಂಕಸಾಳ ಮುಂತಾದವರು ಇದ್ದರು.