ಅಂಕೋಲಾ: ಈಡಿಗ ನಿಗಮ ರಚಿಸುವಂತೆ ಪ್ರಣವಾನಂದ ಸ್ವಾಮೀಜಿಯವರು ನಿರಂತರ ಹೋರಾಟ ಮಾಡುತ್ತಿದ್ದು, ಸರಕಾರ ಜುಲೈ 5ರಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿತ್ತು ಆದರೆ ಇನ್ನುವರೆಗೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ಜುಲೈ 29, 30ರಂದು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಿರುವುದರಿಂದ ತಾಲೂಕಿನ ಶ್ರೀ ನಾರಾಯಣ ಗುರು ವೇದಿಕೆ ವತಿಯಿಂದ ಹೋರಾಟಕ್ಕೆ ಸಾಥ್ ನೀಡಿ ಪತ್ರ ಚಳವಳಿ ಹಮ್ಮಿಕೊಂಡರು.
ನಿಯೋಗದಲ್ಲಿ ಪ್ರಣವಾನಂದ ಸ್ವಾಮೀಜಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿ. ಸುನೀಲಕುಮಾರ, ಶಾಸಕರಾದ ಉಮಾಕಾಂತ ಕೋಟ್ಯಾನ್, ಕುಮಾರ ಬಂಗಾರಪ್ಪ, ಹರತಾಳ ಹಾಲಪ್ಪ, ಸುನೀಲ ನಾಯ್ಕ, ಸುಭಾಶ ಗುತ್ತೇದಾರ ಮುಖ್ಯಮಂತ್ರಿಗಳ ಬಳಿ ತೆರಳಿ ಈಡಿಗ ನಿಗಮ ಬೇಡಿಕೆಯನ್ನು ಮುಂದಿಟ್ಟು ಅದು ಕಾರ್ಯರೂಪಕ್ಕೆ ಬರುವಂತೆ ಆಗ್ರಹಿಸಲಿದ್ದಾರೆ.
ಶ್ರೀ ನಾರಾಯಣಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ ಮಾತನಾಡಿ, ರಾಜ್ಯದಲ್ಲಿ 70 ಲಕ್ಷಕ್ಕೂ ಅಧಿಕ ಈಡಿಗ ಸಮುದಾಯದವರಿದ್ದಾರೆ. ಇವರಲ್ಲಿ ಕೆಲವೇ ಕೆಲವರು ಮಾತ್ರ ಶ್ರೀಮಂತರಿದ್ದು, ಉಳಿದವರು ಬಹುತೇಕ ಬಡವರಾಗಿದ್ದಾರೆ. ಹೀಗಾಗಿ ಈಡಿಗ ನಿಗಮ ಮಾಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಸಮಾಜದವರೂ ಕೂಡ ಮುಖ್ಯವಾಹಿನಿಯಲ್ಲಿ ಬರುವಂತಾಗಲಿದೆ. ಆಂಧ್ರ ಪ್ರದೇಶದಲ್ಲಿ ಈಗಾಗಲೇ ಈಡಿಗ ನಿಗಮ ಮಾಡಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಜಾರಿಯಾಗಬೇಕು. ಹಾಗೇ ಕುಲಕಸುಬಾದ ಸೇಂದಿಗೂ ಅವಕಾಶ ನೀಡಬೇಕು ಎಂದರು.
ನಾಮಧಾರಿ ಸಮಾಜದ ಮುಖಂಡರಾದ ಡಿ.ಜಿ.ನಾಯ್ಕ ಮಾತನಾಡಿ, ಈಡಿಗ ನಿಗಮ ರಚನೆಯಾದರೆ ಸಾಕಷ್ಟು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕೇವಲ ರಾಜಕಾರಣಿಗಳು, ಸ್ವಾಮೀಜಿಯವರು ಮಾತ್ರ ಹೋರಾಡುವುದಲ್ಲ. ಬದಲಿಗೆ ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು. ನಾವು ರಾಜಧಾನಿಗೆ ತೆರಳದಿದ್ದರೂ ನಮ್ಮದೇ ತಾಲೂಕಿನಲ್ಲಿಯೂ ಕೂಡ ಪತ್ರ ಚಳವಳಿಯ ಮೂಲಕ ನಮ್ಮ ಹಕ್ಕಿಗಾಗಿ ಆಗ್ರಹಿಸಬೇಕು. ಹಾಗಾದಾಗ ಮಾತ್ರ ನಾವು ಏನನ್ನಾದರೂ ಪಡೆದುಕೊಳ್ಳಲು ಸಾಧ್ಯ ಎಂದರು.
ಮುಖ್ಯಮ0ತ್ರಿಯವರ ವಿಳಾಸಕ್ಕೆ ನಿಗಮ ಮಂಡಳಿ ರಚಿಸುವ ಕುರಿತು ಹಕ್ಕೊತ್ತಾಯಿಸಿ ಅಂಚೆ ಪೆಟ್ಟಿಗೆಗೆ ಪತ್ರಗಳನ್ನು ಹಾಕಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಗುರು ವೇದಿಕೆಯ ಕಾರ್ಯದರ್ಶಿ ಮಂಜುನಾಥ ಕೃಷ್ಣ ನಾಯ್ಕ, ನಾಮಧಾರಿ ಸಮಾಜದ ಮಂಜುನಾಥ ದತ್ತಾ ನಾಯ್ಕ, ಎಂ.ಎಂ. ಕರ್ಕಿಕರ, ಮೋಹನ ನಾಯ್ಕ, ಗೋವಿಂದ್ರಾಯ ನಾಯ್ಕ, ವಿಶ್ವನಾಥ ತುಕ್ಕಪ್ಪ ನಾಯ್ಕ, ಸುರೇಶ ಎಸ್. ನಾಯ್ಕ ಅಸ್ಲೆಗದ್ದೆ, ರಾಘು ಕಾಕರಮಠ, ಪಾಂಡು ನಾಯ್ಕ, ಮಂಜುನಾಥ ನಾಯ್ಕ ಇತರರಿದ್ದರು.