ಕಾರವಾರ: ರೈಲ್ವೇ ಇಲಾಖೆಯಲ್ಲಿ ಹಣದ ಅಭಾವ ಇರುವುದರಿಂದ ಹಿರಿಯ ನಾಗರಿಕರಿಗೆ ರೈಲ್ವೇ ಪ್ರಯಾಣದಲ್ಲಿ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ರೈಲ್ವೇ ಸಚಿವರು ಹೇಳಿಕೆ ನೀಡಿರುವುದು ಸರಕಾರ ಹಿರಿಯ ನಾಗರಿಕರಿಗೆ ಮಾಡಿರುವ ಅವಮಾನ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಶಂಭು ಶೆಟ್ಟಿ ದೂರಿದ್ದಾರೆ.
ಸುಮಾರು ಮೂರು ವರ್ಷದ ಹಿಂದೆ ಕೊರೋನಾ ತೀವ್ರಗತಿಯಲ್ಲಿ ಹಿರಿಯ ನಾಗರಿಕರನ್ನು ಪೀಡಿಸುತ್ತಿದ್ದಾಗ, ಸರಕಾರ ಹಿರಿಯ ನಾಗರಿಕರು ಹೆಚ್ಚು ಹೆಚ್ಚು ಪ್ರಯಾಣ ಮಾಡಿ ತಮ್ಮ ಜೀವಕ್ಕೆ ಅಪಾಯ ತಂದೊಟ್ಟುಕೊಳ್ಳಬಾರದು ಎಂಬ ನೆಪವೊಡ್ಡಿ ರೈಲ್ವೆಯಲ್ಲಿ ಹಿರಿಯ ನಾಗರಿಕರಿಗಿದ್ದ ರಿಯಾಯತಿಯನ್ನು ರದ್ದು ಮಾಡಿತ್ತು. ತದನಂತರ ದೇಶದಲ್ಲಿ ಕೊರೋನಾ ಸ್ಥಿತಿ ಯಥಾಸ್ಥಿತಿಗೆ ಮರಳಿದರೂ, ದೇಶದಾದ್ಯಂತ ಕೋಟ್ಯಾಂತರ ಹಿರಿಯ ನಾಗರಿಕರು ಹಿಂದಿದ್ದ ರೈಲ್ವೇ ರಿಯಾಯತಿ ದರವನ್ನು ಮತ್ತೆ ನೀಡಬೇಕೆಂದು ಕೇಳಿಕೊಂಡರೂ ಕೇಂದ್ರ ಸರಕಾರದ ಕಿವಿಗೆ ಈ ಕೂಗು ಕೇಳಿಸಲೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರಕಾರದಲ್ಲಿ ಜಾಹೀರಾತಿಗಾಗಿ 900 ಕೋಟಿ ರೂಪಾಯಿ ಖರ್ಚು ಮಾಡಲು, ಉದ್ಯಮಪತಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಲು ಹಣವಿದೆ. ಆದರೆ ಹಿರಿಯ ನಾಗರಿಕರ ರೈಲ್ವೇ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲು ಹಣ ಇಲ್ಲ ಎಂಬುದು ನಾಚಿಕೆಗೇಡು. ಆದ್ದರಿಂದ ಈ ಕೂಡಲೇ ಕೇಂದ್ರ ಸರಕಾರ ಈ ಹಿಂದೆ ಹಿರಿಯ ನಾಗರಿಕರಿಗೆ ನೀಡುತ್ತಿದ್ದ ರಿಯಾಯಿತಿ ರೈಲ್ವೇ ದರವನ್ನು ಕೂಡಲೇ ಪುನರ್‌ಪ್ರಾರಂಭಿಸಬೇಕೆಂದು ಆಗ್ರಹಿಸಿದ್ದಾರೆ.