ಶಿರಸಿ: ಅಪಾಯದ ಸ್ಥಳಗಳಿಂದ ಉಪಾಯದಿಂದ ಕೌಶಲ್ಯಗಳನ್ನು ಬಳಸಿ ಜೀವಹಾನಿ, ಆಸ್ತಿ ಹಾನಿಗಳನ್ನು ತಪ್ಪಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ‘ಶ್ರೀ ಧರ್ಮಸ್ಥಳ ಶೌರ್ಯ ತಂಡ’ವಾಗಿದೆ ಎಂದು ತಹಶೀಲ್ದಾರ್ ಶ್ರೀಧರ್ ಮಂದಲಮನಿ ಹೇಳಿದರು.
ಅವರು ನಗರದ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆ ಸಭಾಂಗಣದಲ್ಲಿ ನಡೆದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಷ ನಾಯ್ಕ ಕಾನಸೂರು ಮಾತನಾಡಿ, ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ಜನರ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಅವರು ಮಾತನಾಡಿ, ಸ್ವಯಂ ಸೇವಕರು ಧೈರ್ಯ, ತ್ಯಾಗ, ಆತ್ಮವಿಶ್ವಾಸ ಮತ್ತು ಸೇವಾ ಮನೋಭಾವ ಹೊಂದಿದ್ದು, ಸ್ವಯಂ ಸ್ಪೂರ್ತಿಯಿಂದ ರಕ್ಷಣಾ ಕಾರ್ಯಕ್ಕೆ ಸದಾ ಬದ್ಧರಾಗಿರಬೇಕು ಹಾಗೂ ಸಿದ್ಧರಾಗಿರಬೇಕು, ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರು ತಕ್ಷಣ ಸ್ಪಂದಿಸಬೇಕು. ಮೊದಲು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಬಳಿಕ ಇತರರ ರಕ್ಷಣೆಗೆ ನೆರವಾಗಬೇಕು ಎಂದು ಹೇಳಿದರು.
ಡಿವೈಎಸ್‌ಪಿ ರವಿ ಡಿ.ನಾಯಕ್ ಮಾತನಾಡಿ, ಸ್ವಯಂ ಜಾಗ್ರತೆಯಿಂದ ಇತರರನ್ನೂ ಕಾಪಾಡುವ ಬಗ್ಗೆ ಗಮನ ಹರಿಸಿ ಶೌರ್ಯ ತಂಡದ ಕೀರ್ತಿ ಪತಾಕೆಯನ್ನು ಹಾರಿಸುವಂತಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಮು ಕಿಣಿ, ಲಂಬೋದರ ಪಟಗಾರ ಅಗ್ನಿಶಾಮಕ ಠಾಣಾಧಿಕಾರಿ, ಎಚ್.ಎನ್.ನಟರಾಜ್ ಮುಖ್ಯೋಪಾಧ್ಯಾಯ ಭೂಮಾ ಪ್ರೌಢಶಾಲೆ, ಗೌರಿ ನಾಯ್ಕ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.