ಅಂಕೋಲಾ: ಜನಸೇವಕ ಕವಿ ಡಾ.ದಿನಕರ ದೇಸಾಯಿ ಅವರ ಹೆಸರಿನಲ್ಲಿ ಅಂಕೋಲೆಯ ಡಾ.ದಿನಕರದೇಸಾಯಿ ಸ್ವಾರಕ ಪ್ರತಿಷ್ಠಾನವು ಕಳೆದ ನಲವತ್ತೊಂದು ವರ್ಷಗಳಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ಕೊಡಮಾಡುವ ರಾಷ್ಟ್ರಮಟ್ಟದ ‘ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ವನ್ನು ಈ ವರ್ಷ ಉಡುಪಿಯ ಡಾ. ಕಾತ್ಯಾಯಿಣಿ ಕುಂಜಿಬೆಟ್ಟು ಅವರ ‘ಅವನು ಹೆಣ್ಣಾಗಬೇಕು’ ಹಾಗೂ ಮೈಸೂರಿನ ಮೌಲ್ಯ ಸ್ವಾಮಿಯವರ ‘ಸುಮ್ಮನೆ ಬಿದ್ದಿರುವ ಬಿಕ್ಕುಗಳು’ ಕೃತಿಗಳಿಗೆ ಜಂಟಿಯಾಗಿ ಲಭಿಸಿದೆ.
ಇಲ್ಲಿಯವರಗೆ ಇಪ್ಪತ್ತೆರಡು ‘ಡಾ. ದಿನಕರ ದೇಸಾಯಿ ಕಾವ್ಯ ಪುರಸ್ಕಾರ’ಗಳನ್ನು ಇಪ್ಪತ್ಮೂರು ಜನರಿಗೆ ಕೊಡಲಾಗಿದ್ದು, ಇದು ಇಪ್ಪತ್ಮೂರನೇ ಕಾವ್ಯ ಪುರಸ್ಕಾರವಾಗಿದೆ. ಈ ವರ್ಷ ಒಟ್ಟೂ ಐವತ್ತು ಕೃತಿಗಳು ಸ್ಫರ್ಧಾ ಕಣದಲ್ಲಿದ್ದು, ಅಂತಿಮ ಸುತ್ತಿಗೆ ಉತ್ತಮ ಸಂವೇದನೆಯ ಕಾವ್ಯಗಳಿರುವ ಐದು ಕೃತಿಗಳನ್ನು ಆಯ್ದಕೊಳ್ಳಲಾಗಿತ್ತು. ಅಂತಿಮ ಸುತ್ತಿನಲ್ಲಿದ್ದ ಐದೂ ಕೃತಿಗಳು ಮಹಿಳಾ ಲೇಖಕರದ್ದಾಗಿದ್ದುದು ಈ ವರ್ಷದ ವಿಶೇಷವಾಗಿತ್ತು. ಡಾ. ಜಿ.ಪಿ. ಬಸವರಾಜು ಮೈಸೂರು, ಶ್ರೀ ಸುಬ್ರಾಯ ಮತ್ತಿಹಳ್ಳಿ ಸಿದ್ಧಾಪುರ ಹಾಗೂ ಡಾ. ವಿನಯಾ ಒಕ್ಕುಂದ ಧಾರವಾಡ ಇವರನ್ನೊಳಗೊಂಡ ನಿರ್ಣಾಯಕ ಮಂಡಳಿಯ ತೀರ್ಮಾನದಂತೆ ಈ ಆಯ್ಕೆ ಮಾಡಲಾಗಿದೆ. ಮೂವರು ನಿರ್ಣಾಯಕರು ಪ್ರತ್ಯೇಕವಾಗಿ ನೀಡಿದ ಅಂಕಗಳನ್ನು ಕ್ರೊಢೀಕರಿಸಿದಾಗ ಮೌಲ್ಯ ಸ್ವಾಮಿ ಹಾಗೂ ಡಾ. ಕುಂಜಿಬೆಟ್ಟು ಅವರ ಕೃತಿಗಳು ಸಮಾನ ಅಂಕ ಪಡೆದಿರುವ ಕಾರಣ ಎರಡೂ ಕೃತಿಗಳಿಗೆ ಜಂಟಿಯಾಗಿ ಪ್ರಶಸ್ತಿ ಘೋಷಿಸಲಾಗಿದೆ.
ಕಾವ್ಯ ಪುರಸ್ಕಾರದ ಒಟ್ಟೂ ಮೊತ್ತ ರೂಪಾಯಿ 25ಸಾವಿರವಾಗಿದ್ದು, ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಈ ವರ್ಷ ಪ್ರಶಸ್ತಿ ಇಬ್ಬರಲ್ಲಿ ಹಂಚಿಕೆಯಾಗಿರುವುದರಿ0ದ ಪ್ರಶಸ್ತಿಯ ಮೊತ್ತವನ್ನು ಇಬ್ಬರೂ ಪ್ರಶಸ್ತಿ ಪುರಸ್ಕೃತರಲ್ಲಿ ಸಮಾನವಾಗಿ ಹಂಚಿಕೆಮಾಡಿ, ಪ್ರತ್ಯೇಕ ಪ್ರಶಸ್ತಿ ಫಲಕಗಳನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ನವೆಂಬರ ತಿಂಗಳಲ್ಲಿ ಅಂಕೋಲೆಯಲ್ಲಿ ಜರುಗಲಿದೆ ಎಂದು ಪ್ರತಿಷ್ಠಾನದ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.