ಅಂಕೋಲಾ: ತಾಲೂಕಿನ ಹಟ್ಟಿಕೇರಿಯ ಜೇಸಿ ಆಂಗ್ಲ ಮಾದ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತನ್ನು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲೆಯಲ್ಲಿ ಚುನಾವಣೆ ನಡೆಸಿರುವದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಚುನಾವಣೆ ಮತ್ತು ಆಡಳಿತದ ಮಾದರಿಯನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಹಾಗೂ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಶೈಕ್ಷಣಿಕ ಮತ್ತು ಪ್ರಾಪಂಚಿಕ ಜ್ಞಾನ ಸಂಪಾದನೆಗೆ ಮಾತ್ರ ಬಳಸಬೇಕು ಎಂದರು.
ಪತ್ರಕರ್ತ ನಾಗರಾಜ ಜಾಂಬಳೇಕರ ಮಾತನಾಡಿ ಶಾಲೆಗಳಲ್ಲಿ ನಡೆಸುವ ಮಾದರಿ ಚುನಾವಣೆಗಳು ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ವಿದ್ಯಾರ್ಥಿ ನಾಯಕರಾಗಿ ಒಳ್ಳೆಯ ನಡತೆಯಿಂದ ಮುಂದೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳಿಗೆ ಅವರ ಹುದ್ದೆಯ ಬ್ಯಾಚ್ ನೀಡಲಾಯಿತು. ಸನಮ್ ನಾಯಕ (ಆಹಾರ), ದೀಪ್ತಿ ಕಾಮತ (ಪ್ರಾರ್ಥನೆ), ತಿಲಕ ಗೌಡ (ಸಾಂಸ್ಕ್ರತಿಕ) ಸುಮೀತ ನಾಯಕ (ಆರೋಗ್ಯ), ಅನೀಶ ನಾಯಕ (ಕ್ರೀಡೆ) ವಿಭಾಗದ ಪ್ರತಿನಿಧಿಗಳಾಗಿ ಅಧಿಕಾರ ಸ್ವೀಕರಿಸಿದರು.
ಶಾಲೆಯ ಮುಖ್ಯ ವಿದ್ಯಾರ್ಥಿಯಾಗಿ ಮಣಿಕಂಠ ನಾಯಕ, ಮುಖ್ಯ ವಿದ್ಯಾರ್ಥಿನಿಯಾಗಿ ತನ್ವಿ ರಾಮನಾಥಕರ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸಂಘಟಿಸಿದ ವಿವಿಧ ಸ್ಪರ್ಧಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕಿ ಚಂದ್ರಪ್ರಭಾ ಕೇಣಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿದರು. ಹೈಸ್ಕೂಲ ಮುಖ್ಯಾಧ್ಯಾಪಕಿ ಮಂಜುಳಾ ನಾಯ್ಕ, ಕೆ.ಜಿ.ಸ್ಕೂಲ್ ಮುಖ್ಯಾಧ್ಯಾಪಕಿ ಶಿಲ್ಪಾ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕಿ ಅಶ್ವಿನಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶೀಲಾ ನಾಯ್ಕ ಶಾಲಾ ಪ್ರತಿನಿಧಿಗಳ ಕರ್ತವ್ಯದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.