ಅಂಕೋಲಾ:ತಾಲೂಕಿನ ಬೆಳಸೆಯ ಗುಡ್ಡದ ಮೇಲೆ ಜಿಲ್ಲಾ ಕಾರಾಗೃಹ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ವಿಚಾರ ತಿಳಿದಿದ್ದು, ಇದು ಯಾವುದೇ ಕಾರಣಕ್ಕೂ ನಮ್ಮಗ್ರಾಮದ ಸುತ್ತಲಿನ ವಾತಾವರಣದಲ್ಲಿ ನಿರ್ಮಾಣವಾಗುವುದು ಬೇಡ ಎಂದು ಬೆಳಸೆ ಹಿಚ್ಚಡ ಗ್ರಾಮಸ್ಥರು ತಹಶೀಲ್ದಾರ ಉದಯ ಕುಂಬಾರ ಮೂಲಕ ಸಂಬಂಧಿಸಿದ ಸರಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು.
ಕಾರಾಗೃಹ ನಿರ್ಮಾಣ ಏಕೆ ಬೇಡ?: ಬೆಳಸೆ ಮತ್ತು ಹಿಚ್ಚಡ ಗ್ರಾಮಗಳು ಕೃಷಿಯನ್ನೇ ಅವಲಂಭಿಸಿ ಇರುವ ಗ್ರಾಮಗಳು. ಇಲ್ಲಿ ಸಾಕುವ ದನ ಕರುಗಳು ಈ ಗುಡ್ಡವನ್ನೇ ಮೇವಿಗಾಗಿ ಆಶ್ರಯಿಸುತ್ತವೆ.ಬೆಳಸೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಸರಕಾರದ ಜಮೀನಿದ್ದು, 6ಎಕರೆ 25 ಗುಂಟೆ ರಾಣಿ ಕಿತ್ತೂರು ಚೆನ್ನಮ್ಮವಸತಿ ಶಾಲೆಗೆ ದೊರೆತು, ಶಾಲೆ ಮತ್ತು ವಸತಿನಿಲಯ ನಿರ್ಮಾಣಗೊಂಡಿದ್ದು, ಶೈಕ್ಷಣಿಕ ಪ್ರಗತಿ ಕಾರ್ಯಾರಂಭಗೊಂಡಿದೆ. ಇಂದಿರಾಗಾಂಧಿ ವಸತಿ ಶಾಲೆಗೆ 3 ಎಕರೆ 9 ಗುಂಟೆ ಜಮೀನು ಮಂಜೂರಿ, ಈ ಶಾಲೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಐಟಿಐ ಕಾಲೇಜಿಗೆ 3ಎಕರೆ 9 ಗುಂಟೆ, ಜೈಲಿಗೆ 22 ಎಕರೆ 16 ಗುಂಟೆ ಮಂಜೂರಿಯಾಗಿದೆ. ಇವುಗಳ ಮಧ್ಯೆ ಜೈಲು ನಿರ್ಮಿಸಿ ವಾತಾವರಣ ಹದಗೆಡಿಸುವುದು ಸರಿಯಲ್ಲ ಎನ್ನುವುದು ಹಿಚ್ಚಡ ಮತ್ತು ಬೆಳಸೆ ಗ್ರಾಮಸ್ಥರ ಅಭಿಪ್ರಾಯವಾಗಿದೆ.