ಹಳಿಯಾಳ: ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಕೆಲ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಆದ್ದರಿಂದ ಇವುಗಳನ್ನು ತಡೆಗಟ್ಟಲು ಹಾಗೂ ಶಾಂತಿಯುತ ವಾತಾವರಣ ಸೃಷ್ಟಿ ಮಾಡಲು ಸಾರ್ವಜನಿಕರು ಕೈಜೋಡಿಸಬೇಕಾಗಿದೆ. ಕಾನೂನುಬಾಹಿರ ಯಾವುದೇ ಘಟನೆಗಳು ನಡೆದರೆ ಇನ್ನುಮುಂದೆ ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ನೂತನ ಪಿಎಸ್‌ಐ ವಿನೋದ ರೆಡ್ಡಿ ಹೇಳಿದರು.
ಶುಕ್ರವಾರ ಠಾಣೆಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿದಿನ ಇನ್ನುಮುಂದೆ ರಾತ್ರಿ 11 ಗಂಟೆಗೆ ಎಲ್ಲ ಬಾರ್- ಅಂಗಡಿಗಳು ಬಂದ್ ಆಗಬೇಕು. ಸಾರ್ವಜನಿಕರು ಅನಾವಶ್ಯಕವಾಗಿ ರಾತ್ರಿ 11 ಗಂಟೆ ನಂತರ ತಿರುಗಾಡಬಾರದು. ಓಸಿ, ಮಟಕಾ, ಗ್ಯಾಂಬ್ಲಿಂಗ್ನಂತಹ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಮುಲಾಜಿಲ್ಲದೆ ಪ್ರಕರಣ ದಾಖಲಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಗೆ ತಮ್ಮ ಕಾಯಕ ಮಾಡಲು ಬಿಡಬೇಕು ಹಾಗೂ ಕಾನೂನಿಗೆ ಗೌರವ ನೀಡಬೇಕಿದೆ ಎಂದರು.