ಶಿರಸಿ:ಇಂದು ಶೈಕ್ಷಣಿಕ ವ್ಯವಸ್ಥೆ ಬದಲಾಗಿದೆ.ಈ ಬದಲಾದ ಪರಿಸ್ಥಿತಿಯಲ್ಲಿ ನ್ಯಾಕ್ ಮಾನ್ಯತೆ ಪಡೆದುಕೊಳ್ಳುವದು ಬಹಳ ಮುಖ್ಯವಾಗಿದೆ. ಹಾಗಾಗಿ ನ್ಯಾಕ್ ನಿರ್ಧರಿಸಿದ ಮಾನದಂಡಗಳನ್ನು ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಎಂ ಎಂ ಕಾಲೇಜಿನಲ್ಲಿ ಐ.ಐ.ಸಿ ಪ್ರಾರಂಭಿಸಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಬೆಂಗಳೂರಿನ ವಿಶೇಷ ಅಧಿಕಾರಿ ಪ್ರೊ ಎಂ ಜಯಪ್ಪ ಹೇಳಿದರು.
ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ,ಎಂಇಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ನ್ಯಾಸ್ಕಾಮ್ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಎಂ ಎಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಪ್ಲುಯೆನ್ಸಿ ವಿಷಯದ ಕುರಿತು ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆ ಕಾಲೇಜುಗಳ ಪ್ರಾಚಾರ್ಯರಿಗೆ, ನೋಡಲ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಹಾಗೂ ಕಾಲೇಜಿನ ಇನ್ಸ್ಟಿಟ್ಯೂಶನ್ ಇನ್ನೊವೇಶನ್ ಕೌನ್ಸಿಲ್ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಿಜಿಟಲ್ ಪ್ಲುಯೆನ್ಸಿ ವಿಷಯವನ್ನು ಎನ್ಇಪಿ ಶಿಕ್ಷಣ ಪದ್ದತಿಯಲ್ಲಿ ಒಂದು ಕೌಶಲ್ಯ ವಿಷಯವಾಗಿ ಅಳವಡಿಸಲಾಗಿದ್ದು,ಈಗಾಗಲೇ ರಾಜ್ಯದ 17 ವಿಶ್ವವಿದ್ಯಾಲಯಗಳು ಪ್ರಾರಂಭಿಸಿವೆ.ಈ ಶೈಕ್ಷಣಿಕ ವರ್ಷದಿಂದ ಕರ್ನಾಟಕ ವಿಶ್ವವಿದ್ಯಾಲಯ ಇದನ್ನು ಪ್ರಾರಂಭಿಸಿದೆ.ಇಂದು ಪ್ರತಿಯೊಬ್ಬರೂ ಡಿಜಿಟಲ್ ಜ್ಞಾನ ಹೋದುವುದು ಮೂಲಭೂತ ಅಂಶವಾಗಿದ್ದು ಈ ನಿಟ್ಟಿನಲ್ಲಿ ಇದು ವಿದ್ಯಾರ್ಥಿಗಳಿಗೆ ಉಪಯೋಗಿ ಆಗಿದೆ. ನ್ಯಾಸ್ಕಾಮ್ ನಿಂದ ಈ ವಿಷಯ ಕಲಿಸುವ ಪ್ರಾಧ್ಯಾಪಕರುಗಳಿಗೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಆಗದ ಹಾಗೆ ತಾಂತ್ರಿಕ ಶಿಕ್ಷಣ ಒದಗಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ ಇ ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಮಾತನಾಡಿ ವಿಜ್ಞಾನ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡುವುದು ಅವಶ್ಯಕವಾಗಿದೆ. ಡಿಜಿಟಲ್ ಪ್ಲುಯೆನ್ಸಿ ವಿಷಯ ಎನ್ ಇ ಪಿ ವ್ಯವಸ್ಥೆ ಬರುವ ಮೊದಲೇ ಜಾರಿಯಾಗಬೇಕಿತ್ತು. ದೇಶ ವಿದೇಶಗಳಲ್ಲಿ ವಿದ್ಯಾರ್ಥಿಗಳು ಬೆಳೆಯಲು ಇದು ಅವಶ್ಯವಾಗಿದೆ.ಎನ್ ಇ ಪಿ ವ್ಯವಸ್ಥೆ ಬಂದಾಗ ಗೊಂದಲಗಳಿದ್ದವು ಅವುಗಳೆಲ್ಲ ಈಗ ಪರಿಹಾರ ವಾಗಿದೆ. ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಇಂತಹ ಕಾರ್ಯಗಾರಗಳ ಮುಖಾಂತರ ಶಿಕ್ಷಕರಿಗೆ ತರಬೇತಿ ನೀಡಿ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.
ಕರ್ನಾಟಕ ವಿಶ್ವ ವಿದ್ಯಾಲಯದ ನೋಡಲ್ ಅಧಿಕಾರಿ ಸುರೇಶ್ ತುವಾರ್ ಡಿಜಿಟಲ್ ಪ್ಲುಯೆನ್ಸಿ ಕುರಿತು ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳಿಗೆ ಇಂದಿನ ಅಗತ್ಯತೆಗಳ ಪ್ರಕಾರ ಶಿಕ್ಷಣ ಒದಗಿಸಲು ಡಿಜಿಟಲ್ ಫ್ಲುಯೆನ್ಸಿ ಹಾಗೂ ನಾಸ್ಕಂ ಸಹಾಯಕವಾಗಿವೆ. ಶಿಕ್ಷಕರಿಗೆ ತಜ್ಞರಿಂದ ತಾಂತ್ರಿಕ ಶಿಕ್ಷಣದ ಕುರಿತು ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ನಿಯಮಬದ್ಧವಾಗಿ ಶಿಕ್ಷಣ ಒದಗಿಸಲು ಸಹಾಯಕವಾಗುತ್ತದೆ ಎಂದರು.
ಐ ಐ ಸಿ ಕುರಿತು ಮಾತನಾಡಿದ ಡಾ ಗಣೇಶ ಹೆಗಡೆ ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಉಪಯೋಗ ಆಗಲೆಂದು ಐ ಐ ಸಿ ಯನ್ನು ತಂದಿದ್ದು ಇದರ ಮೂಲಕ ಕಾರ್ಯಕ್ರಮ, ತರಬೇತಿಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳ ಕೌಶಲ್ಯ ಪೂರ್ಣ ಕ್ರಿಯಾಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ, ಇಂದಿನ ಔದ್ಯೋಗಿಕ ಕ್ಷೇತ್ರಕ್ಕೆ ತಕ್ಕನಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಹಕಾರಿ. ನಮ್ಮ ಕಾಲೇಜಿನಲ್ಲಿ ಈ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಲಿದ್ದಾರೆ ಎಂದರು.
ನ್ಯಾಸ್ಕಾಮ್ ದ ಅಧಿಕಾರಿ ದಿನೇಶ್ ಕುಮಾರ್ ಪಾಣಿಗ್ರಹಿ ಹಾಗೂ ಬೆಳಗಾವಿ ಗೊಗಟೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರೊ ವೇಣುಗೋಪಾಲ ಜಾಲಿಹಾಳ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಯ ಎಲ್ಲಾ ಕಾಲೇಜಿನ ಉಪನ್ಯಾಸಕರು ಹಾಗೂ ಡಿಜಿಟಲ್ ಫ್ಲುಯೆನ್ಸಿಯ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿದರು.ಐಕ್ಯುಎಸಿ ಸಂಚಾಲಕ ಡಾ ಎಸ್ ಎಸ್ ಭಟ್ ವಂದಿಸಿದರು. ಡಾ ಸತೀಶ್ ನಾಯ್ಕ ನಿರೂಪಿಸಿದರು.