ಕಾರವಾರ: ಹಿರಿಯ ರಂಗಭೂಮಿ ಕಲಾವಿದ, ಲೇಖಕ- ನಿರ್ದೇಶಕ ಮಾರುತಿ ಬಾಡ್ಕರ್ (62) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವಿವಾಹಿತರಾಗಿದ್ದ ಅವರು, ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ದೇಶನ ಮಾಡಿದ್ದರು. ಕಾರವಾರದಲ್ಲಿ ಕೊಂಕಣಿ- ಮರಾಠಿ ಭಾಷೆಗಳ ನಡುವೆ ಕನ್ನಡವನ್ನ ಉಳಿಸಿ- ಬೆಳೆಸಲು ಸಾಕಷ್ಟು ಶ್ರಮಿಸಿದ್ದರು. ಜ್ಯೋತಿ ಕಿರಣ, ರೌಡಿ ರಾಜ, ತಾಳಿ ಕಟ್ಟಿದರೂ ಗಂಡನಲ್ಲ, ಜನುಮದಾತಾ, ನಟ ಸಾಮ್ರಾಟ, ಓ ನನ್ನ ನಲ್ಲೆ, ನೀ ಹಿಂಗ ನೋಡಬ್ಯಾಡ ನನ್ನ, ಬೆಳದಿಂಗಳಾಗಿ ಬಾ, ಜಾರಿ ಬಿದ್ದ ಜಾಣ, ಸೇಡಿನ ಜ್ವಾಲೆ, ಸೂತ್ರದ ಗೊಂಬೆ ಸೇರಿದಂತೆ ಹಲವು ಸಾಮಾಜಿಕ ಮತ್ತು ಕೌಟುಂಬಿಕ ನಾಟಕಗಳನ್ನ ಅವರು ಬರೆದಿದ್ದರು.
ರಂಗಭೂಮಿ ಕಲಾವಿದರ ವೇದಿಕೆಯ ಗೌರವಾಧ್ಯಕ್ಷರಾಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಅನೇಕ ಸಂಘಟನೆಗಳಲ್ಲೂ ಅವರು ಕಾರ್ಯನಿರ್ವಹಿಸಿದ್ದರು. ಮಾರುತಿ ಬಾಡ್ಕರ್ ಅವರ ಸಾವು ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಕೋಟ್…
ಹಿರಿಯ ರಂಗಭೂಮಿ ಕಲಾವಿದರಾದ ಮಾರುತಿ ಬಾಡ್ಕರ್ ಅವರ ಅಗಲುವಿಕೆಯ ಸುದ್ದಿ ಅಘಾತ ತಂದಿದೆ. ಮಾನವೀಯ ಮೌಲ್ಯಗಳನ್ನು ಹೊದ್ದುಕೊಂಡಿದ್ದ ಹಿರಿಯ ಜೀವ ನಮ್ಮನ್ನಗಲಿರುವುದು ತೀರ ಬೇಸರದ ಸಂಗತಿ. ಅವರ ಅಗಲುವಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಹಾನಿಯನ್ನುಂಟು ಮಾಡಿದೆ. ಅವರ ನಾಟಕ ಹಾಗೂ ರಂಗಭೂಮಿಯ ಆಶಯಗಳನ್ನು ಜೀವಂತವಾಗಿರಿಸೋಣ. -· ಬಿ.ಎನ್.ವಾಸರೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ
ಮಾರುತಿ ಬಾಡ್ಕರ್ ನಿಧನ ತೀವ್ರ ನೋವು ತಂದಿದೆ. ಅವರು ಅದ್ಭುತ ಮಾನವೀಯ ಪ್ರೀತಿಯ ಕಲಾವಿದರಾಗಿದ್ದರು. ಅವರು ಕಲಾವಿದರಾಗಿ ಕಾರವಾರದ ಜನಮಾನಸದಲ್ಲಿ ಎಂದಿಗೂ ಉಳಿಯಲಿದ್ದಾರೆ.-· ನಾಗರಾಜ್ ಹರಪನಹಳ್ಳಿ, ಕಾರವಾರ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ
ಕನ್ನಡ ಹಾಗೂ ರಂಗಭೂಮಿಗಾಗಿ ಬದುಕನ್ನೇ ಮುಡಿಪಾಗಿಟ್ಟ ಮಾರುತಿ ಬಾಡಕರ ನಮ್ಮನ್ನು ಅಗಲಿರುವುದು ತೀವ್ರ ನೋವನ್ನು ಉಂಟುಮಾಡಿದೆ. ಕಾರವಾರದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಹಾಗೂ ರಂಗಭೂಮಿಗೆ ಮೆರುಗು ತರುವಲ್ಲಿ ನಿರಂತರವಾಗಿ ಶ್ರಮಿಸಿದ ಅವರಿಗೆ ದೇವರು ಸದ್ಗತಿ ಕರುಣಿಸಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ.- · ರೂಪಾಲಿ ನಾಯ್ಕ, ಶಾಸಕಿ