ಭಟ್ಕಳ: ಇಲ್ಲಿನ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ನ್ಯೂ ಶಮ್ಸ್ ಶಾಲೆಯು ಹತ್ತನೆ ತರಗತಿಯಲ್ಲಿ ಸತತ ಆರು ವರ್ಷಗಳಿಂದ ಶೇ 100 ಫಲಿತಾಂಶ ದಾಖಲಿಸುತ್ತ ಬಂದಿದ್ದು, ಈ ವರ್ಷದ ಐಸಿಎಸ್‌ಇ ಹತ್ತನೆ ತರಗತಿಯ ಫಲಿತಾಂಶದಲ್ಲಿ 11 ವಿದ್ಯಾರ್ಥಿಗಳು ಶೇ 90ಕ್ಕೂ ಹೆಚ್ಚು ಅಂಕ ಪಡೆದುಕೊಂಡು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಲಿಯಾಖತ್ ಅಲಿ ತಿಳಿಸಿದ್ದಾರೆ.
ಒಟ್ಟು 66 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಶೇ 90ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡರೆ, 19 ವಿದ್ಯಾರ್ಥಿಗಳು ಶೇ 80ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ. 20 ವಿದ್ಯಾರ್ಥಿಗಳು ಶೇ 70 ರಿಂದ ಶೇ 80 ಅಂಕಗಳನ್ನು ಪಡೆದುಕೊಂಡಿದ್ದು, 16 ವಿದ್ಯಾರ್ಥಿಗಳು ಶೇ 60ರಿಂದ 70 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಿನಾಮ್ ಅಲಿ ಅಕ್ಬರ್ ಶೇ 93.8 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಮೊಹಮ್ಮದ್ ಸಾದ್ ಮೋಮಿನ್ ಶೇ 93.6 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದು, ಸುನ್ದುಸ್ ಸಯ್ಯದ್ ಅಬ್ದುಲ್ ರೆಹ್ಮಾನ್ ಶೇ 93 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಇದೇ ರೀತಿಯ ಸುಹೈಬಾ ಫಾತಿಮಾ ಶೇ 92.6, ಸಹಾರಾಬಾನು ಹಾನಿಯಾ ಶೇ 92, ಸಾಜಾಹ ಶೇ 91.8, ಬಿಲ್ಕೀಸ್ ಶೇ 91.2, ಫಿದಾ ಶೇ.91, ಆಯಿಶಾ ಕಾಝಿಯಾ ಶೇ 90.8, ಮೊಹಮ್ಮದ್ ಉನೈಸ್ ಶೇ 90.4 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಪ್ರಸಕ್ತ ವರ್ಷದ ಹತ್ತನೆ ತರಗತಿಯಲ್ಲಿ ನ್ಯೂ ಶಮ್ಸ್ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಇದಕ್ಕಾಗಿ ಶಾಲೆಯ ಪ್ರಾಂಶುಪಾಲರಿಗೆ ಹಾಗೂ ಶಿಕ್ಷಕ ವರ್ಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ತರಬಿಯತ್ ಎಜ್ಯುಕೇಶನ್ ಸೊಸೈಟಿಯ ಆಡಳಿತ ಮಂಡಳಿ ಅಭಿನಂದಿಸಿದೆ.