ಕಾರವಾರ: ತಾಲೂಕಿನ ಮಾಜಾಳಿಯಲ್ಲಿರುವ ಬಿಎಸ್ಎನ್ಎಲ್ ಎಕ್ಸಚೆಂಜ್ ಒಳಗಡೆ ಮಳೆ ನೀರು ನುಗ್ಗಿದ ಪರಿಣಾಮ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿದ್ದು, ಕಳೆದ 8 ದಿನಗಳಿಂದ ಮಾಜಾಳಿ ಸುತ್ತ ಮುತ್ತಲ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಮಳೆಯಿಂದ ಉಪಕರಣಗಳು ಶಾರ್ಟ್ ಆಗಿ ಸುಟ್ಟು ಹೋದ ಪರಿಣಾಮ ಬಿಎಸ್‌ಎನ್‌ಎಲ್‌ನವರಿಗೆ ಸುಮಾರು 2 ಲಕ್ಷ ರೂ.ಗೂ ಅಧಿಕ ಹಾನಿ ಸಂಭವಿಸಿದೆ.ಶುಕ್ರವಾರ ಹೊಸ ಉಪಕರಣಗಳನ್ನು ಅಳವಡಿಸುವ ಮೂಲಕ ಮತ್ತೆ ಈ ಪ್ರದೇಶದಲ್ಲಿ ಬಿಎಸ್ ಎನ್ಎಲ್ ಸಂಪರ್ಕವನ್ನು ಸಾಧಿಸಲಾಗಿದೆ.
ಮಾಜಾಳಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ಬಿಎಸ್ಎನ್ಎಲ್ ಎಕ್ಸಚೆಂಜ್ ಕಟ್ಟಡ ಸ್ವಲ್ಪ ಕೆಳಮಟ್ಟದಲ್ಲಿದ್ದು, ಸುಮಾರು 8 ದಿನಗಳ ಹಿಂದೆ ಬಿದ್ದ ಬಾರಿ ಮಳೆಯ ಸಂದರ್ಭದಲ್ಲಿ ಎಕ್ಸಚೆಂಜ್ ಕಟ್ಟಡದ ಒಳಗೆ ನೀರು ನುಗ್ಗಿತ್ತು. ನೀರು ನುಗ್ಗುವ ಸಂದರ್ಭದಲ್ಲಿ ಎಕ್ಸಚೆಂಜ್ ಕಟ್ಟಡದ ಎಲ್ಲ ಉಪಕರಣಗಳನ್ನು ಸ್ಥಗಿತಗೊಳಿಸಲಾಗಿತ್ತು, ಆದರೂ ನೀರಿನ ಕಾರಣಕ್ಕೆ ಒದ್ದೆ ಆಗಿದ್ದರ ಉಪಕರಣಗಳನ್ನು ಮರು ದಿನ ಪುನರಾರಂಭಿಸಿದ ಸಂದರ್ಭದಲ್ಲಿ ಶಾರ್ಟ್ ಆಗಿ ಎಲ್ಲ ಉಪಕರಣಗಳು ಸುಟ್ಟು ಹಾಳಾಗಿದ್ದವು. ಬೆಂಗಳೂರಿನಿಂದ ಹೊಸ ಉಪಕರಣಗಳು ಆಗಮಿಸಿದ್ದು, ಇದನ್ನು ಅಳವಡಿಸಿ ವ್ಯವಸ್ಥೆ ಸರಿಪಡಿಸಲಾಗಿದೆ.