ಶಿರಸಿ: ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ದೇಶದ ಶೈಕ್ಷಣಿಕ ವಿಧಾನವನ್ನು ಪರಿವರ್ತನೆ ಮಾಡಲಿದೆ. ಮೊದಲು ಭಾಷೆ ಮತ್ತು ಐಚ್ಛಿಕ ವಿಷಯಗಳ ಎರಡು ಸಂಯೋಜನೆಯ ವ್ಯವಸ್ಥೆ ಇತ್ತು, ಎನ್ ಇ ಪಿ ವ್ಯವಸ್ಥೆಯಲ್ಲಿ ನಾಲ್ಕು ರೀತಿಯ ಸಂಯೋಜನೆ ನೀಡಿದ್ದು ಭಾಷಾ ವಿಷಯವನ್ನು ಸಾಮರ್ಥ್ಯ ವರ್ಧಕ ಎಂದು ಗುರುತಿಸಿದೆ ಎಂದು ದಾಂಡೇಲಿಯ ಬಿ ಎನ್ ಪದವಿ ಕಾಲೇಜು ಪ್ರಾಚಾರ್ಯ ಡಾ ಆರ್ ಜಿ ಹೆಗಡೆ ಹೇಳಿದರು.
ಅವರು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ ಸಂಯೋಜನೆಯಲ್ಲಿ ಇಂಗ್ಲಿಷ್, ಸಂಸ್ಕೃತ, ಹಿಂದಿ ಭಾಷಾ ವಿಭಾಗ ಪಿಯುಸಿ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಯಲ್ಲಿ ಭಾಷಾ ವಿಷಯಗಳ ಪ್ರಭಾವ ಎಂಬ ವಿಷಯದ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾಷೆ ಶಿಕ್ಷಣ ವ್ಯವಸ್ಥೆಯಲ್ಲಿ ಬಹು ಮುಖ್ಯ ಸ್ಥಾನವನ್ನು ಹೊಂದಿದ್ದು, ವಿದ್ಯಾರ್ಥಿಗಳ ಸಾಮರ್ಥ್ಯ ಬಲವರ್ಧನೆಯ ಭಾಗವಾಗಿದೆ. ಸಾಮಾನ್ಯ ವ್ಯಕ್ತಿ ಶ್ರೇಷ್ಠವಾದ ವ್ಯಕ್ತಿ ಆಗಲು ಭಾಷಾ ಕೌಶಲ್ಯ ಮುಖ್ಯ ಎಂದರು.
ಕಾಲೇಜಿನ ಐಕ್ಯುಎಸಿ ಸಂಚಾಲಕ ಡಾ ಎಸ್ ಎಸ್ ಭಟ್ ಮಾತನಾಡಿ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಜ್ಞಾನವನ್ನು ಈ ರೀತಿಯ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಉಪಸಮಿತಿ ಸದಸ್ಯರಾದ ಲೋಕೇಶ್ ಹೆಗಡೆ ಮಾತನಾಡಿ ಕಾರ್ಯಾಗಾರಗಳು ನಮ್ಮಲ್ಲಿರುವ ಗೊಂದಲಗಳನ್ನು ಪರಿಹರಿಸಿ ಹೊಸ ಜ್ಞಾನವನ್ನು ಪಡೆದುಕೊಳ್ಳಲು ಉತ್ತಮ ವೇದಿಕೆ ಆಗಿದೆ. ವ್ಯಕ್ತಿತ್ವ ವಿಕಸನಕ್ಕೆ ಭಾಷಾ ಸಂಪನ್ಮೂಲ ಮತ್ತು ಕಾರ್ಯಾಗಾರಗಳ ಮೂಲಕ ಸಿಗುವ ತರಬೇತಿ ಗಳಿಂದ ಸಾದ್ಯ.ಇದರ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಜ್ಞಾನ ಸಂಪಾದನೆ ಮಾಡಬಹುದು. ಇಂದು ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆ. ಎನ್ ಇ ಪಿ ಯಂತ ಹೊಸ ವ್ಯವಸ್ಥೆ ಬಂದಿದೆ ಹಿಂದೆಯೇ ಈ ವ್ಯವಸ್ಥೆ ಬಂದಿದ್ದರೆ ದೇಶದ ಶೈಕ್ಷಣಿಕ ಸ್ಥಿತಿ ಉತ್ತಮವಾಗುತ್ತಿತ್ತು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿದರು. ಹಿಂದಿ ವಿಭಾಗದ ವುಖ್ಯಸ್ಥೆ ಡಾ ಸುಜಾತಾ ಪಾತರಪೆಕರ್ ಪ್ರಾಸ್ತಾವಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥೆ ಶೈಲಜಾ ಭಟ್ ವಂದಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ತಬಸುಮ್ ತಿಳವಳ್ಳಿ ನಿರೂಪಿಸಿದರು.