ಹೊನ್ನಾವರ: ಶೃಂಗೇರಿ ಜಗದ್ಗುರುಗಳ ಅನುಗ್ರಹದಂತೆ ಪ್ರತಿವರ್ಷ ನಡೆಯುವ ಮಳೆಗಾಲ ಆರಂಭದಲ್ಲಿ ಮೀನುಗಾರಿಕೆಯ ಮುಹೂರ್ತ ಹಾಗೂ ಸಮುದ್ರ ಪೂಜೆ ಕಾರ್ಯಕ್ರಮ ತಾಲ್ಲೂಕಿನ ಮಂಕಿ ಮಡಿಯಲ್ಲಿ ನಡೆಯಿತು.
ಮಂಕಿ ಗ್ರಾಮದಲ್ಲಿರುವ ಸಾವಿರಾರು ಮೀನುಗಾರರ ಕುಟುಂಬಗಳು ಅನಾದಿಕಾಲದಿಂದಲೂ ಮಳೆಗಾಲದ ಆರಂಭದಲ್ಲಿ ಶೃಂಗೇರಿ ಜಗದ್ಗುರುಗಳ ಆಶಿರ್ವಾದ ಪಡೆದು ಸಮುದ್ರ ಪೂಜೆ ಮಾಡಿ, ಅವರು ನೀಡಿದ ಮಹೂರ್ತದಂದು ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಆರಂಭಿಸುತ್ತಾರೆ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಯೂನಿಯನ್ ಆಶ್ರಯದಲ್ಲಿ ವೇದಮೂರ್ತಿ ಹೇಮಂತ್ ಭಟ್ಟರವರ ಮಾರ್ಗದರ್ಶದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಆರಂಭದಲ್ಲಿ ದೇವಿಕಾನ ದುರ್ಗಾಪರಮೇಶ್ವರಿ ದೇವಸ್ಥಾನ, ಕೆಂಡಮಹಾಸತಿ ದೇವಸ್ಥಾನ, ಶ್ರೀಭದ್ರಾಂಭಿಕೇಶ್ವರ ದೇವಸ್ಥಾನ ಹಾಗೂ ಮಳಿಯಾಳಿ ಜಟಕೇಶ್ವರ ದೇವಸ್ಥಾನದಲ್ಲಿ ಪೂಜೆ, ನಂತರ ನವಗ್ರಹ ಶಾಂತಿ, ಅಭಿಷೇಕ ಹಾಗೂ ಸಮುದ್ರಪೂಜೆ ನಡೆಯಿತು.
ಈ ವೇಳೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅಣ್ಣಪ್ಪ ಎಸ್.ಖಾರ್ವಿ ಹಾಗೂ ಸಂಘದ ಪದಾಧಿಕಾರಿಗಳು, ಕೊಂಕಣಿ ಖಾರ್ವಿ ಸಮಾಜ ಹಾಗೂ ಹರಿಕಾಂತ ಸಮಾಜದ ಪ್ರಮುಖರು ಇದ್ದರು.