ಶಿರಸಿ: ಕೊರೋನಾದಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ತೀವೃತರವಾದ ಪರಿಣಾಮ ಬೀರಿದ್ದರಿಂದ ಈ ಬಾರಿ ಎಲ್ಲಾ ಶಾಲೆಗಳಲ್ಲೂ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಿರುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ.ನಾಗೇಶ ಹೇಳಿದರು.
ಅವರು ಬುಧವಾರ ಗುರು ಪೂರ್ಣಿಮಿಯ ನಿಮಿತ್ತ ಶಿರಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕಲಿಕಾ ಚೇತರಿಕೆ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಇಲ್ಲಿಯೂ ಕೂಡಾ ಉತ್ತಮವಾಗಿ ನಡೆಸಲು ಬಿಇಒ ಮತ್ತು ಡಿಡಿಪಿಐ ಅವರಿಗೆ ಸೂಚನೆ ನೀಡಿರುವದಾಗಿ ತಿಳಿಸಿದರು.
ಪಠ್ಯ- ಪುಸ್ತಕ ಪರಿಷ್ಕರಣೆ ವಿಷಯ ಮುಗಿದ ಅಧ್ಯಾಯ. ರಾಜಕೀಯ ಪಕ್ಷಗಳು ಈ ವಿಷಯವನ್ನು ರಾಜಕೀಯಕರಣಗೊಳಿಸುತ್ತಿದೆ. ಈ ಹಿಂದೆಯೂ ಕೂಡಾ ಬರಗೂರು ರಾಮಚಂದ್ರಪ್ಪನವರ ಪಠ್ಯಪುಸ್ತಕ ಬಂದಾಗಲೂ 157ಕ್ಕೂ ಹೆಚ್ಚಿನ ಬದಲಾವಣೆಗಳು ಆಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಾಭಿಮಾನ ಮತ್ತು ಮಾತೃಭೂಮಿಯ ಬಗ್ಗೆ ಅಭಿಮಾನ ಮತ್ತು ಸ್ವಾಭಿಮಾನ ತರುವಂತಹ ಕೆಲಸವನ್ನು ಮಾಡಿದ್ದೇವೆ. ಇದನ್ನೆ ವಿರೋಧಿಸುವ ಕೆಲಸ ವಿರೋಧ ಪಕ್ಷ ಮಾಡುತ್ತಿದೆ ಎಂದರು.
ಅತಿಯಾದ ಮಳೆಯಿಂದಾಗಿ ಶಾಲೆಗಳಿಗೆ ಒಂದು ವಾರ ರಜೆ ನೀಡಲಾಗಿತ್ತು. ಮಕ್ಕಳ ಸಂಖ್ಯೆ ಶೇ 75ರಿಂದ 80ರಷ್ಟಿರುವುದರಿಂದ ನೂರಕ್ಕೆ ನೂರರಷ್ಟು ಮಕ್ಕಳನ್ನು ಕರೆತರಲು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. 15ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಮಲೆನಾಡಿನ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹಾಗೂ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಇದ್ದರು.