ಯಲ್ಲಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ವ್ಯಕ್ತಿ ಪೂಜೆಯ ಆರಾಧನೆ ಇಲ್ಲ. ತತ್ವದ ಆರಾಧನೆ; ಹೀಗಾಗಿ ಭಗವಾ ಧ್ವಜವನ್ನು ಗುರುವಾಗಿ ಸ್ವೀಕರಿಸಲಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಹಕಾರ್ಯವಾಹ ಕಿರಣ ಗುಡ್ಡದಕೇರಿ ಹೇಳಿದರು.
ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗುರು ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ ಗುರು ಪೂಜಾ ಉತ್ಸವದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಎಲ್ಲವೂ ರಾಷ್ಟ್ರಕ್ಕೆ ಸಮರ್ಪಿತ ಎಂಬ ಮನೋಭಾವದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘದ ಭಾವನೆಯಾಗಿದೆ. ಯೋಗ, ತ್ಯಾಗ, ಶೌರ್ಯದ ಪ್ರತೀಕವಾದ ಭಗವಾಧ್ವಜ ಕತ್ತಲೆಯಿಂದ ಬೆಳಿಕಿನೆಡೆಗೆ ಕರೆದೊಯ್ಯುವ ಸಂಕೇತವಾಗಿದೆ ಎಂದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂತೋಷಕುಮಾರ ಜಿಗಳೂರು ಅಧ್ಯಕ್ಷತೆ ವಹಿಸಿದ್ದರು. ಆಗಮಿಸಿದ್ದ ಕಾರ್ಯಕರ್ತರೆಲ್ಲರೂ ಭಗವಾಧ್ವಜಕ್ಕೆ ಗುರುಕಾಣಿಕೆ ಅರ್ಪಿಸಿದರು. ನಗರ ಕಾರ್ಯವಾಹ ಮಂಜುನಾಥ ಹಿರೇಮಠ ಸ್ವಾಗತಿಸಿದರು, ರಾಜೇಶ ಹೆಗಡೆ ವಂದಿಸಿದರು.