ಯಲ್ಲಾಪುರ: ಹಬ್ಬ ಮುಗಿಯುತ್ತಿದ್ದಂತೆ ಮಾಂಸದ ತ್ಯಾಜ್ಯವನ್ನು ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದ ಮಾಗೋಡ ರಸ್ತೆ ಹಾಗೂ ಪಕ್ಕದಲ್ಲಿ ಮಾಂಸದ ತ್ಯಾಜ್ಯವನ್ನು ಚೆಲ್ಲಿದ್ದು ಪಟ್ಟಣ ಪಂಚಾಯಿತಿಯವರು ಚೆಲ್ಲಿದ ವ್ಯಕ್ತಿಗಳನ್ನು ಗುರುತಿಸಿ ದಂಡ ವಿಧಿಸಿದ್ದಾರೆ.
ಭಾನುವಾರ ಮುಸ್ಲಿಂ ಸಮಾಜದ ಬಕ್ರೀದ್ ಹಬ್ಬ ಮುಗಿದಿದ್ದು, ಮಾಂಸದ ವ್ಯಾಪಾರಿಗಳು ವ್ಯಾಪಕ ಪ್ರಮಾಣದಲ್ಲಿ ಮಾಂಸ ವ್ಯಾಪಾರ ಮಾಡಿದ್ದು ಉಳಿದ ತ್ಯಾಜ್ಯವನ್ನು ಚೀಲದಲ್ಲಿ ತುಂಬಿ ಕಾರವಾರ ರಸ್ತೆಯ ಪ್ರಾರಂಭದಲ್ಲಿ ಎಲ್ಲಿ ಬೇಕೆಂದರಲ್ಲಿ ಚೆಲ್ಲಿ ಹೋಗಿದ್ದರು. ಈ ಕುರಿತು ಹಿತ್ಲಕಾರಗದ್ದೆ ಭಾಗದ ಜನ ಹಾಗೂ ಮಾಗೋಡ್ ರಸ್ತೆಯಲ್ಲಿ ಸಂಚರಿಸುವವರು ಅಸಮಾಧಾನ ವ್ಯಕ್ತಪಡಿಸಿ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರು.
ಮಂಗಳವಾರ ಪ.ಪಂ ಆರೋಗ್ಯ ನಿರೀಕ್ಷಕ ಗುರು ಗಡಗಿ ನೇತೃತ್ವದಲ್ಲಿ ಮಾಂಸ ಚೆಲ್ಲಿದ ವ್ಯಾಪಾರಿಗಳು ಹಾಗೂ ಇನ್ನಿತರರನ್ನು ಗುರುತಿಸಿ ಪ್ರತಿಯೊಬ್ಬರಿಗೂ 200 ರೂ. ದಂಡ ವಿಧಿಸಲಾಗಿದೆ. ಚೆಲ್ಲಿದ ಮಾಂಸವನ್ನು ಸ್ವಚ್ಛಗೊಳಿಸಲಾಗಿದೆ ಎಂದು ಪ.ಪಂ ಸದಸ್ಯ ಸತೀಶ ನಾಯ್ಕ ತಿಳಿಸಿದ್ದಾರೆ.