ಕಾರವಾರ: ಕಾಳಿನದಿ ಯೋಜನೆ 2ನೇ ಹಂತ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದ್ದು, ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಒಟ್ಟೂ 7,064 ಕ್ಯೂಸೆಕ್ಸ್ ನೀರನ್ನ ಹೊರಬಿಡಲಾಗಿದೆ.
ಜಲಾಶಯದ ಗರಿಷ್ಟ ಸಾಮರ್ಥ್ಯ 34.50 ಮೀಟರ್ ಆಗಿದ್ದು, ಮಳೆಗಾಲದ ಅವಧಿಯಲ್ಲಿ ಜಿಲ್ಲಾಡಳಿತ ಗರಿಷ್ಟ ಮಟ್ಟ 31 ಮೀಟರ್‌ಗೆ ನಿಗದಿಪಡಿಸಿದೆ. ಸದ್ಯ 30.50 ಮೀಟರ್ ಆಸುಪಾಸಿನಲ್ಲಿ ಜಲಾಶಯದ ಮಟ್ಟವನ್ನ ಕಾಯ್ದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಅಲ್ಲದೇ ಮಳೆಯಿಂದಾಗಿ ಒಳಹರಿವು ಹೆಚ್ಚಾಗಿರುವ ಕಾರಣ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ.
ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ದಂಡೆಯ ಪಾತ್ರದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಜಿಲ್ಲಾಡಳಿತ ನಿಗದಿಪಡಿಸಿದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಕದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಕಾಳಿನದಿ ಜಲವಿದ್ಯುತ್ 2ನೇ ಯೋಜನಾ ಹಂತದ ಕದ್ರಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.