ಮುಂಡಗೋಡ: ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಜುಲೈ 18 ರಂದು ಬೆಳಿಗ್ಗೆ 11 ಘಂಟೆಗೆ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಅವಿಶ್ವಾಸ ಮಂಡನೆ ಸಭೆ ಕರೆಯುವಂತೆ ಶಿರಸಿ ಉಪವಿಭಾಗಾಧಿಕಾರಿಗಳು ಗ್ರಾ. ಪಂ ಪಿಡಿಒಗೆ ಸೂಚಿಸಿದ್ದಾರೆ.
ಚವಡಳ್ಳಿ ಗ್ರಾ.ಪಂ ನ 13 ಸದಸ್ಯರ ಪೈಕಿ 9 ಜನ ಸದಸ್ಯರು ಸೇರಿ ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶ ನೀಡುವಂತೆ ಶಿರಸಿ ಉಪವಿಭಾಗಾಧಿಕಾರಿ ದೇವರಾಜು ಅವರಿಗೆ ಕಳೆದ ತಿಂಗಳು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಅವಿಶ್ವಾಸ ಮಂಡನಾ ಸಭೆ ಕರೆಯುವಂತೆ ಗ್ರಾ. ಪಂ ಪಿಡಿಒಗೆ ಸೂಚಿಸಿದ್ದರು. ಅದೇ ರೀತಿ ಜೂನ್ 17 ರಂದು ಅವಿಶ್ವಾಸ ಮಂಡನಾ ಸಭೆ ಕೂಡ ನಿಗದಿಯಾಗಿತ್ತು. ಆದರೆ ಜೂನ್ 10 ರಂದು ಅಧ್ಯಕ್ಷರು ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ಆದೇಶ ತಂದಿದ್ದರಿಂದ ಅವಿಶ್ವಾಸ ಮಂಡನೆ ಪ್ರಕ್ರಿಯೆಗೆ ಬ್ರೇಕ್ ಬಿದ್ದಂತಾಗಿತ್ತು. ಇದರಿಂದ ಮತ್ತಷ್ಟು ಕೆರಳಿದ ಸದಸ್ಯರು ತಡೆಯಾಜ್ಞೆ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಮತ್ತೊಮ್ಮೆ ಈ ಬಗ್ಗೆ ಪರಿಶೀಲಿಸಿದ ಧಾರವಾಡ ಉಚ್ಚನ್ಯಾಯಾಲಯ ತಡೆಯಾಜ್ಞೆಯನ್ನು ತೆರವುಗೊಳಿಸಿ ಅವಿಶ್ವಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈಗ ಅವಿಶ್ವಾಸ ಗೊತ್ತುವಳಿ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಅಧ್ಯಕ್ಷರಿಗೆ ಅವಿಶ್ವಾಸ ಗೊತ್ತುವಳಿ ಮಂಡನಾ ಸಭೆ ಎದುರಿಸುವುದು ಅನಿವಾರ್ಯವಾಗಿದ್ದು, ಅಧ್ಯಕ್ಷರು ಬಹುತೇಕ ವಿಶ್ವಾಸ ಕಳೆದುಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.