ಅಂಕೋಲಾ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಬೇಕು. ಯೋಜನೆಯಿಂದ ಯಾವುದೇ ಅರ್ಹ ಫಲಾನುಭವಿ ವಂಚಿತವಾಗಬಾರದು ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದರು.
ತಾಲ್ಲೂಕಿನ ಹುಲಿದೇವರವಾಡ ಮತ್ತು ಪುರಲಕ್ಕಿಬೇಣ ಬೂತ್ ಅಧ್ಯಕ್ಷರ ಮನೆಗಳಿಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ಜನರಿಗೆ ತಲುಪುತ್ತಿರುವ ಮಾಹಿತಿಯನ್ನು ಬೂತ್ ಸಮಿತಿಯವರು ಮಾಹಿತಿ ನೀಡಬೇಕು. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್, ಸಂಧ್ಯಾ ಸುರಕ್ಷಾ, ಉಜ್ವಲ್ ಯೋಜನೆ, ಜನ್‌ಧನ್, ಪಿಂಚಣಿ ಯೋಜನೆ ಹೀಗೆ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಜೀ ಅವರು ಜಾರಿಗೆ ತಂದಿದ್ದಾರೆ. ಅವೆಲ್ಲ ಯೋಜನೆಗಳು ಜನರಿಗೆ ತಲುಪುತ್ತಿದೆಯೋ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡಬೇಕು.
ಯಾರು ಇದುವರೆಗೂ ಆಯುಷ್ಮಾನ್ ಭಾರತ ಕಾರ್ಡನ್ನು ಮಾಡಿಸಿಕೊಳ್ಳಲ್ಲಿಲ್ಲವೋ ಅವರು ಕಾರ್ಡನ್ನು ಮಾಡಿಸಿಕೊಳ್ಳಬೇಕು. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನರಿಗೆ ಸಹಾಯಕವಾಗುವ ಯೋಜನೆಗಳನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಎಲ್ಲ ಫಲಾನುಭವಿಗಳ ಮಾಹಿತಿಯನ್ನು ಬೂತ್ ಸಮಿತಿಯವರು ಮನೆ ಮನೆಗೆ ಹೋಗಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ಯೋಜನೆಗಳು ತಲುಪದೇ ಇದ್ದಲ್ಲಿ ಅವರಿಗೆ ಮಾಹಿತಿ ನೀಡಿ ಸೌಲಭ್ಯಗಳನ್ನು ತಲುಪುವಂತೆ ಮಾಡಬೇಕು. ಬೂತ್‌ನ್ನು ಸದೃಢಗೊಳಿಸಲು ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಸಜ್ಜಾಗಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸಂಜಯ ನಾಯ್ಕ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಗಾಂವಕರ, ಸದಸ್ಯ ಮಂಗೇಶ ಆಗೇರ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ಟ, ಮಾರುತಿ ಗೌಡ, ಮಹಾಶಕ್ತಿಕೇಂದ್ರದ ಅಧ್ಯಕ್ಷ ಕೃಷ್ಣಕುಮಾರ ಮಹಾಲೆ, ಬೂತ್ ಅಧ್ಯಕ್ಷ ವಿಷ್ಣು ಗೌಡ, ಮಂಜುನಾಥ ಆಗೇರ, ಬೂತ್ ಪ್ರಭಾರಿ ನಾಗರಾಜ ಐಗಳ, ಪ್ರಮುಖರು, ಕಾರ್ಯಕರ್ತರು ಇದ್ದರು.