ಹೊನ್ನಾವರ: ಪಟ್ಟಣದಲ್ಲಿರುವ ತಾಲೂಕಿನ ಬಸ್ ನಿಲ್ದಾಣಕ್ಕೆ ರಾತ್ರಿ ಸಮಯದಲ್ಲಿ ಬಸ್ ಆಗಮಿಸದೇ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕರುನಾಡ ವಿಜಯಸೇನೆ ವತಿಯಿಂದ ತಹಶೀಲ್ದಾರರಿಗೆ ಹಾಗೂ ಬಸ್ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ಲೋಕಾರ್ಪಣೆಗೊಂಡು ಸಕಲ ರೀತಿಯ ವ್ಯವಸ್ಥೆ ಹೊಂದಿದ್ದರೂ ವಿವಿಧೆಡೆಯಿಂಧ ಆಗಮಿಸುವ ಬಸ್ ನಿಲ್ದಾಣದ ಒಳ ಹೋಗದೇ ರಾಷ್ಟ್ರೀಯ ಹೆದ್ದಾರಿಯಲ್ಲೆ ಪ್ರಯಾಣಿಕರನ್ನು ಇಳಿಸಿ ಹೋಗಲಾಗುತ್ತಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಬರಲಿದೆ. ರಾತ್ರಿ ಸಮಯದಲ್ಲಿ ಬಸ್ ಮೂಲಕ ಪ್ರಯಾಣಿಸಲು ಹೆದ್ದಾರಿಯಲ್ಲಿ ಕಾಯುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯು ಇದೆ. ನಿಲ್ದಾಣದೊಳಗೆ ಪ್ರತಿ ಬಸ್ ಹೋಗುವ ರೀತಿಯಲ್ಲಿ ಚಾಲಕ, ನಿರ್ವಾಹಕರಿಗೆ ಆದೇಶಿಸಬೇಕು. ವಾರದೊಳಗೆ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಮುಂದುವರೆದರೆ ಬಸ್ ತಡೆದು ಪ್ರತಿಭಟನೆ ಮಾಡಬೇಕಾಗುವುದು. ಅಂತಹ ಸನ್ನಿವೇಶಗಳಿಗೆ ಎಡೆ ಮಾಡಿಕೊಡದೇ ಕೂಡಲೇ ಆದೇಶ ನೀಡಬೇಕು. ನಿಯಮ ಪಾಲನೆ ಮಾಡದೇ ಚಾಲಕ- ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ತಹಶೀಲ್ದಾರ ನಾಗರಾಜ ನಾಯ್ಕಡ್ ಹಾಗೂ ಡಿಪೋ ಮ್ಯಾನೇಜರ್ ಪರವಾಗಿ ನಿಲ್ದಾಣದ ಅಧಿಕಾರಿಗಳು ಮನವಿ ಸ್ವೀಕರಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ, ಜಿಲ್ಲಾ ವಕ್ತಾರ ಶ್ರೀರಾಮ ಹೊನ್ನಾವರ, ಜಿಲ್ಲಾ ಕಾರ್ಯದರ್ಶಿ ಗಿರೀಶ ನಾಯ್ಕ ಹಡಿಕಲ್, ತಾಲೂಕು ಅಧ್ಯಕ್ಷ ನಿತಿನ್ ಆಚಾರ್ಯ, ಸಂತೋಷ ಮತ್ತಿತರರು ಹಾಜರಿದ್ದರು.