ಶಿರಸಿ: ಕಳೆದ ಇಪ್ಪತ್ತೈದು ವರ್ಷಗಳಿಂದ ಪರಿಸರ ಕೇತ್ರದಲ್ಲಿ ಸೇವಾ ಕಾರ್ಯ ಮಾಡುತ್ತಿರುವ ಯೂತ್ ಫಾರ್ ಸೇವಾ ಸಂಸ್ಥೆಯ ಪರಿಸರ ವಿಭಾಗದ ರಾಜ್ಯ ಸಂಯೋಜಕ ಉಮಾಪತಿ ಭಟ್ಟ್ ಕೆವಿ ಅವರಿಗೆ ಪರಿಸರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಕೊಡಲ್ಪಡುವ ಪ್ರತಿಷ್ಠಿತ “ಕಿರ್ಲೊಸ್ಕರ್ ವಸುಂಧರಾ ಸನ್ಮಾನ ” ಪರಿಸರ ಪ್ರಶಸ್ತಿ ಲಭಿಸಿದೆ. ಏಪ್ರಿಲ್ 22 ರಂದು ಕೊಪ್ಪಳದಲ್ಲಿ ನಡೆಯುವ “ವಸುಂಧರಾ ಚಲನ ಚಿತ್ರೋತ್ಸವದ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.
ಯುವಕರಿಗಾಗಿ “ಪರಿಸರ ಪ್ರಶಿಕ್ಷಣ” ಮಕ್ಕಳಿಗಾಗಿ “ಹಸಿರು ಪಯಣ” ನಿಸರ್ಗ ಜ್ಞಾನ ಶಿಕ್ಷಣ, ಟೆರೆಸ್ ಗಾರ್ಡನ್ ತರಬೇತಿ, ಪಕ್ಷಿವೀಕ್ಷಣಾ ತರಬೇತಿ, ಜೀವ ವೈವಿಧ್ಯ ತರಬೇತಿ, ಹಸಿರು ಆಹಾರ ಹಸಿರು ಆರೋಗ್ಯ ತರಬೇತಿ, “ಮನೆಮದ್ದು ತರಬೇತಿ”ಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
140 ಕಡೆಗಳಲ್ಲಿ ನವಗ್ರಹ ವನ, ಮತ್ತು ಸಂಗೀತ ಸ್ವರವನ, ತೀರ್ಥಂಕರರ ವನ, ಕುಟುಂಬ ವನ, ಅಶೋಕ ವನ, ಅಕ್ಷರ ವನ,ಶ್ರೀ ಮಾರಿಕಾಂಬಾ ವನ ನಿರ್ಮಾಣ ಮಾಡಿದ ಸಾಧನೆ ಅವರದು.ವಿಶೇಷವಾಗಿ ಜೌಗು ಭೂಮಿ ಉಳಿಸಿ ಆಂದೋಲನದಲ್ಲಿ ನಡೆಸಿ ನೂತನ ಜೌಗುಭೂಮಿ, ದೇವರಕಾಡು ನಿರ್ಮಾಣಕಾರ್ಯ ಮಾಡಿರುತ್ತಾರೆ. ನವಗ್ರಹ ವನ ಕೈಪಿಡಿ, ಚೂಡಿಪೂಜಾ ವೈಜ್ಞಾನಿಕ ಚಿಂತನೆ, ಹಸಿರು ನಾಡಿನಲ್ಲಿ ಅಶೋಕ ವನ, ಸಸ್ಯಲೋಕ, ನಿಸರ್ಗ ಯಾನ, ವನರಾಗ ಸಂಗಮ , ಕೇವಲಜ್ಞಾನ ವೃಕ್ಷಗಳು ಆದರ್ಶ ವನಸಿರಿ ಪರಿಸರ ಸಾಹಿತ್ಯ ರಚನೆ ಮಾಡಿರುತ್ತಾರೆ. ಪರಿಸರ ಗೀತಾ ಅಭಿಯಾನ ನಡೆಸಿ ವನರಾಗ ಸಂಗಮ ಎಂಬ ಧ್ವನಿ ಮುದ್ರಣ ನಡೆಸಿ ಯು ಟ್ಯೂಬಲ್ಲಿ ದೊರೆಯುವಂತೆ ಮಾಡಿರುತ್ತಾರೆ. ನದಿಗಳ ಅಧ್ಯಯನ, ಕಲ್ಯಾಣಿ ಸ್ವಚ್ಚತೆ , ಕೆರೆಗಳ ಉಳಿಸಿ ಅಭಿಯಾನ, ಮಳೆಕೊಯ್ಲು ಜಾಗೃತಿ ಕಾರ್ಯ ನಡೆಸಿ ಜಲಸಂರಕ್ಷಣಾ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಔಷದ ಸಸ್ಯ ಪ್ರದರ್ಶನ ಅವುಗಳ ಮಹತ್ವ ತಿಳಿಸುತ್ತಿದ್ದಾರೆ. ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ “ಕಾಡು ಹಣ್ಣು ಮೇಳ” ನಡೆಸಿ ರೈತರಿಗೆ ಮಾಹಿತಿ ನೀಡಿದ ಖ್ಯಾತಿಯಿದೆ. ಅವರಿಗೆ 2015ರಲ್ಲಿ ‘ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ ಲಭಿಸಿದೆ.ಪ್ರತಿವಾರ ಜನಮಾಧ್ಯಮ ಪತ್ರಿಕೆಯಲ್ಲಿ “ಸಸ್ಯಪುರಾಣ’ ಅಂಕಣದಲ್ಲಿ ಸಸ್ಯಗಳ ಮಾಹಿತಿ ಲೇಖನ ಬರೆಯುತ್ತಿದ್ದಾರೆ.
ಪ್ರಸ್ತುತ ಶಿರಸಿ ನಗರ ಸಭಾ ಜೀವವೈವಿಧ್ಯ ಸಮಿತಿ ಸದಸ್ಯರಾಗಿದ್ದಾರೆ. ಪರ್ಯಾವರಣ ಸಂರಕ್ಷಣಾ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತದ ಸಹಸಂಯೋಜಕರಾಗಿ ಪರಿಸರ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿದ್ದಾರೆ.