ಭಟ್ಕಳ : ಭಾನುವಾರ ಅಕ್ರಮ ಸಾಗಾಟದ ನಾಲ್ಕು ಜಾನುವಾರುಗಳನ್ನು ರಕ್ಷಿಸಿದ್ದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ಕೂಡ ಕಸಾಯಿಖಾನೆಗೆ ಸಾಗಿಸಲು ಮಹಾರಾಷ್ಟ್ರದಿಂದ ಭಟ್ಕಳಕ್ಕೆ ಬರುತ್ತಿದ್ದ ೧೩ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಸಹಿತ ಓರ್ವನನ್ನು ಬಂಧಿಸಿರುವ ಪೊಲೀಸರು ಇಬ್ಬರು ಪರಾರಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದು ಒಟ್ಟು 9 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಜಮೀಲ್ ಯೂಸುಫ್ ಶೇಖ್ (೪೯) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಔರಂಗಾಬಾದ್ ಜಿಲ್ಲೆಯ ಸಮೀರ ಜಮೀಲಾ ಹಾಗೂ ಇನ್ನೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇವರಿಗೆ ಸಹಕರಿಸಿದ ಆರೋಪಿಗಳನ್ನು ಭಟ್ಕಳದ ಅಲ್ತಾಫ್, ಸಹಿ ಅಮ್ರಿ, ಮೌಲಾ ಅಲಿ ,ಅಬೂಬಕರ್, ಹನೀಫ್, ಮುಜೀಬ್ ಎಂದು ಗುರುತಿಸಲಾಗಿದೆ.
ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರು ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3,90,000 ಮೌಲ್ಯದ 9 ಎತ್ತು ಮತ್ತು 4 ಕೋಣಗಳನ್ನು ರಕ್ಷಿಸಿದ್ದಾರೆ. ಇವುಗಳು ಮಹರಾಷ್ಟ್ರದ ಪಾಲೆಗಾಂವ್ ಮೂಲಕ ಹೊನ್ನಾವರದಿಂದ ಭಟ್ಕಳ ಕಡೆಗೆ ಟಾಟಾ ಕಂಪನಿಯ 1512 ಮಾದರಿಯ ಲಾರಿ ನಂ. ಎಮ್.ಹೆಚ್- 41/ಎಯು 8700 ನ ಹಿಂಬದಿಯಲ್ಲಿ ಸುಮಾರು 3,90,000/- ರೂ ಬೆಲೆಯ 13 ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ನೀರು, ಹುಲ್ಲು ಕೊಡದೆ ಹಿಂಸಾತ್ಮಕವಾಗಿ ಕಟ್ಟಿ, ಸಕ್ಷಮ ಪ್ರಾಧಿಕಾರದಿಂದ ವಾಹನದಲ್ಲಿ ಜಾನುವಾರು ಸಾಗಾಟ ಮಾಡಲು ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ. ಇವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಬಳಿಕ ವಶಪಡಿಸಿಕೊಂಡು ಜಾನುವಾರುಗಳನ್ನು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಗೆ ತರಲಾಯಿತು. ನಂತರ ಹಿಂದೂ ಕಾರ್ಯಕರ್ತರು ಸಹಾಯದಿಂದ ಪೊಲೀಸ್ ಮೈದಾನಕ್ಕೆ ಕರೆದುಕೊಂಡು ಹೋಗಿ ಆರೈಕೆ ಮಾಡಿ ಬಳಿಕ ಪೊಲೀಸರು ಹುಬಳ್ಳಿ ಕಲಘಟಕಿಯ ಗೋ ಶಾಲೆಗೆ ಹಸ್ತಾಂತರ ಮಾಡಿದ್ದಾರೆ.
ಡಿವೈಎಸ್ಪಿ ಮಹೇಶ ಕೆ. ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪಿಎಸೈ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ಎಎಸ್‌ಐ ಕೃಷ್ಣಾನಂದ ನಾಯ್ಕ ಪಿಸಿ ಬಸವರಾಜ ಡಿ.ಕೆ., ಮೋಹನ ಕಬ್ಬೇರ, ವೀರಣ್ಣ ಬಳ್ಳಾರಿ, ಲೋಹಿತ್ ಕುಮಾರ ಎಂ.ಪಿ., ಅಂಬರೀಶ ಕುಂಬಾರಿ, ಕಿರಣ ತಿಳಗಂಜಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಹಿಂದು ಜಾಗರಣಾ ವೇದಿಕೆ ಸಹ ಸಂಚಾಲಕರಾದ ನಾಗೇಶ ನಾಯ್ಕ ಹೊನ್ನೆಗದ್ದೆ, ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ, ಲೋಕೇಶ ದೇವಾಡಿಗ ಪೊಲೀಸರಿಗೆ ಸಹಕರಿಸಿದ್ದರು.
ಗೋ ಕಳ್ಳರಿಂದ ರಕ್ಷಣೆ ಮಾಡಿದ ಗೋವುಗಳನ್ನು ಒಲ್ಲೆ ಎನ್ನುವ ಗೋ ಶಾಲೆಗಳು:
ಗೋ ಕಳ್ಳರಿಂದ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿ ಬಳಿಕ ಅವುಗಳನ್ನು ಗೋ ಶಾಲೆಗಳಿಗೆ ಕಳುಹಿಸಲು ಪೊಲೀಸರು ಸಂಪರ್ಕಿಸಿದರೆ ಗೋವುಗಳನ್ನು ತೆಗೆದುಕೊಳ್ಳಲು ತಾಲೂಕು ಸೇರಿದಂತೆ ಜಿಲ್ಲೆಯ ಕೆಲ ಗೋ ಶಾಲೆಗಳು ಒಲ್ಲೆ ಎನ್ನುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ನಿನ್ನೆ ಕೂಡ ಇದೆ ರೀತಿ ಘಟನೆ ಸಂಭವಿಸಿದ್ದು ಭಟ್ಕಳ ಹಳಿಯಾಳ , ಸಿದ್ದಾಪುರ ಗೋ ಶಾಲೆಗಳನ್ನು ಸಂಪರ್ಕಿಸಿದರೆ ಯಾರು ಕೂಡ ಗೋವುಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದು ಪೊಲೀಸರಿಗೆ ತಲೆ ನೋವಾಗಿದೆ .
ಇಂತಹ ಪ್ರಕರಣಗಳು ನಡೆದಾಗ ಸಹಾಯಕ ಆಯುಕ್ತರು ಮುತುವರ್ಜಿ ವಹಿಸಿ ಗೋವುಗಳನ್ನು ಗೋ ಶಾಲೆಯಗೆ ಕಳುಹಿಸಳು ಮುಂದಾಗಬೇಕು ಎಂದು ಹಿಂದೂ ಜಾಗರಣಾ ವೇದಿಕೆಯ ಸಹಸಂಚಾಲಕ ನಾಗೇಶ ನಾಯ್ಕ ಒತ್ತಾಯಿಸಿದ್ದಾರೆ.