ಕಾರವಾರ: ಕೆಲವು ದಿನಗಳಿಂದ ಜಿಲ್ಲೆಯ ಉಷ್ಣಾಂಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣತೆಯ ವಾತಾವರಣ ಕಂಡು ಬರುತ್ತಿದ್ದು, ಇದರಿಂದ ಉಂಟಾಗುವ ಉಷ್ಣ ಗಾಳಿಯ ಪರಿಣಾಮದಿಂದ ಅನಾರೋಗ್ಯಕ್ಕೆ ಒಳಗಾಗುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆಯಾಗಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ, ಹೀಟ್ ವೇವ್ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಸಿ ಗಾಳಿಯ ಪರಿಣಾಮ ಹೀಟ್ ವೇವ್ ಸ್ಟ್ರೋಕ್ನಿಂದ ಬಳಲುವವರಿಗೆ ತಕ್ಷಣದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ, ತಾಲೂಕು ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ಅಗತ್ಯ ಸಂಖ್ಯೆಯ ಬೆಡ್ಗಳನ್ನು ಮೀಸಲಿಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಚಿಕಿತ್ಸಾ ಕೊಠಡಿಯಲ್ಲಿ ತಂಪು ವಾತಾವರಣ ಇರುವಂತೆ ಕೂಲರ್, ಫ್ಯಾನ್ ಸೇರಿದಂತೆ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ನಿರ್ದೇಶಿಸಿದರು.
ಹೀಟ್ ವೇವ್ ಸಂದರ್ಭದಲ್ಲಿ ಹೊರಾಂಗಣದಲ್ಲಿ ಯಾವುದೇ ಬೇಸಿಗೆ ಶಿಬಿರ, ಎನ್.ಸಿ.ಸಿ., ಎನ್.ಎಸ್.ಎಸ್ ಶಿಬಿರಗಳ ಚಟುವಟಿಕೆಗಳನ್ನು ನಡೆಸಬಾರದು. ಬಿಸಿ ಗಾಳಿಯ ಪರಿಣಾಮಗಳ ಕುರಿತಂತೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರಿವು ಮೂಡಿಸುವಂತೆ ಮತ್ತು ಬಿಸಿ ಗಾಳಿ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕರಪತ್ರಗಳನ್ನು ವಿತರಿಸುವಂತೆ ತಿಳಿಸಿದರು.
ಸಾರ್ವಜನಿಕರು ಹೊರಗಡೆ ಓಡಾಡುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಟೋಪಿಗಳನ್ನು ಧರಿಸುವುದು, ಛತ್ರಿಗಳನ್ನು ಬಳಸುವಂತೆ ಮತ್ತು ಸಾದ್ಯವಾದಷ್ಟು ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಓಡಾಡುವುದನ್ನು ಕಡಿಮೆಗೊಳಿಸಬೇಕು. ಬಿಸಿಲಿನಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬಾರದು, ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಆಗಾಗ್ಗೆ ನೀರು ಕುಡಿಯುವ ಮೂಲಕ ದೇಹವು ನಿರ್ಜಲೀಕರಣವಾದಂತೆ ಎಚ್ಚರವಹಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಹಸೀಲ್ದಾರ್ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ವಿಪತ್ತು ಕಾರ್ಯಪಡೆ ಸಭೆಗಳನ್ನು ನಡೆಸಿ, ಹೀಟ್ ವೇವ್ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನೀರಜ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಮೋಹನ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಅರ್ಚನಾ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಕ್ಯಾ.ಡಾ.ರಮೇಶ್ ರಾವ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ನಟರಾಜ್, ಕ್ರಿಮ್ಸ್ನ ವೈದ್ಯರು ಮತ್ತು ವೀಡಿಯೋ ಕಾನ್ಫ್ರೆನ್ಸ್ ಮೂಲಕ ಎಲ್ಲಾ ತಾಲೂಕುಗಳ ತಹಸೀಲ್ದಾರ್ಗಳು ಮತ್ತು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.