ಹೊನ್ನಾವರ; ಕೃಷಿಗೆ ಪೂರಕವಾಗಿ ವಾತಾವರಣ ನಿರ್ಮಾಣವಾಗಲು ಪರಿಸರವು ಪ್ರಮುಖ ಪಾತ್ರ ವಹಿಸಲಿದೆ ಎಂದು ಡಿ.ಎಫ್ಓ ಯೋಗೀಶ ಸಿ.ಕೆ ಅಭಿಪ್ರಾಯಪಟ್ಟರು.
ತಾಲೂಕಿನ ಅಪ್ಸರಕೊಂಡ ಶಾಲಾ ಆವರಣದಲ್ಲಿ “ಸಮೃದ್ದಿ ಗ್ರಾಮ ಅರಣ್ಯ ಸಮಿತಿ” ಅಪ್ಸರಕೊಂಡ ಕೆಳಗಿನೂರು ಇವರ ಗ್ರಾಮ ಅಭಿವೃದ್ದಿ ನಿಧಿಯಿಂದ ಹಿ.ಪ್ರಾ. ಅಪ್ಸರಕೊಂಡ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಸಾಮಾಜಿಕ ಪರಿಶೋಧನಾ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪಶ್ಚಿಮಘಟ್ಟದ ಜೀವ ವೈವಿಧ್ಯತೆ ರಕ್ಷಣೆಯು ನಮ್ಮೆಲ್ಲರ ಮೇಲಿದೆ. ಅರಣ್ಯ ಇಲಾಖೆ ಜೊತೆಜೊತೆಗೆ ಗ್ರಾಮ ಅರಣ್ಯ ಸಮಿತಿ ಪರಿಸರ ಸಂರಕ್ಷಣೆಯಲ್ಲಿ ತೊಡಗುತ್ತಿದೆ. ಇಂತಹ ಸಮಿತಿಯಿಂದ ಇಂದು ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲಾಗುತ್ತಿದೆ ಎಂದರು. ಈ ಭಾಗದಲ್ಲಿ ಪ್ರಕೃತಿ ವಿಕೋಪದಿಂದ, ಗುಡ್ಡ ಕುಸಿತ ಹಾಗೂ ನೆರಹಾವಳಿ ಸಂಭವಿಸುತ್ತಿದೆ. ಈ ಬೆಳವಣೆಗೆಗೆ ಪರಿಸರದ ಅಸಮತೋಲನವೇ ಕಾರಣವಾಗಿದೆ. ನಾವೆಲ್ಲರೂ ಸ್ವಚ್ಚತೆ ಹಾಗೂ ಅರಣ್ಯ ಸಂಪತ್ತಿನ ಸಂರಕ್ಷಣೆಯನ್ನು ಮಾಡೋಣ ಎಂದರು.
ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರಾಮ ಅರಣ್ಯ ಸಮಿತಿಯ ವತಿಯಿಂದ ಸಮವಸ್ತ್ರ ವಿತರಿಸಲಾಯಿತು.
ಸಾಮಾಜಿಕ ಪರಿಶೋಧನಾ ಸಮಿತಿಯ ಮುಖ್ಯಸ್ಥರಾದ ಉಮೇಶ ಮುಂಡಳ್ಳಿ ಮಾತನಾಡಿ ಪ್ರತಿ ಇಲಾಖೆಯಂತೆ ಶಿಕ್ಷಣ ಇಲಾಖೆಯ ಶಾಲೆಯ ಗುಣಮಟ್ಟ ಪರಿಶೀಲನೆ ನಡೆಸುತ್ತಿದೆ. ಇಂದು ಈ ಶಾಲೆಯಲ್ಲಿ ದಾಖಲಾತಿ ಪರಿಶೀಲನೆ ಜೊತೆ ಮಕ್ಕಳ ಜೊತೆ ಸಂವಹನ ನಡೆಸುವ ಕಾರ್ಯವಾಗಿದೆ. ಶಾಲಾ ಪರಿಸರ ಜೊತೆ ಪಾಠ ಹಾಗೂ ಬಿಸಿಯೂಟದ ಗುಣಮಟ್ಟ ಪರಿಶೀಲನೆ ನಡೆಸಿದೆ ಎಂದರು.
ಈ ಸಂದರ್ಭದಲ್ಲಿ ಎಸಿಎಪ್ ಜಿ. ಲೋಹಿತ್ ಕುಮಾರ್, ಆರ್.ಎಫ್.ಓ ಸವಿತಾ ದೇವಾಡಿಗ, ತೋಟಗಾರಿಕಾ ಇಲಾಖೆಯ ಅಧಿಕಾರಿ ಸೂರ್ಯಕಾಂತ ವಡೇರ್, ಗ್ರಾ.ಪಂ. ಉಪಾಧ್ಯಕ್ಷ ಸುರೇಶ ಗೌಡ, ಸಮೃದ್ದಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಅಣ್ಣಪ್ಪ ನರಸ ಗೌಡ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಅಣ್ಣಪ್ಪ ಗೌಡ, ರಮೇಶ ಮಲ್ಲಪ್ಪ, ಮಂಜುನಾಥ ನಾಯ್ಕ, ಮತ್ತಿತರಿದ್ದರು.
ಮುಖ್ಯಶಿಕ್ಷಕ ನಾಗಭೂಷಣ ಸ್ವಾಗತಿಸಿ, ಗಣಪಯ್ಯ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.