ಆಕರ್ಷಿಸುವ ವಿಭಿನ್ನ ವೇಷಭೂಷಣ, ಅದ್ಭುತ ಕುಣಿತದ ಜನಪದ ಕಲೆ
—ಮುಕ್ತಾ ಹೆಗಡೆ
ಮಲೆನಾಡ ಹೆಬ್ಬಾಗಿಲಾದ ಶಿರಸಿಯು ತನ್ನ ಅನನ್ಯತೆಯಿಂದ ನಾಡಿನಾದ್ಯಂತ ಪರಿಚಿತವಾಗಿದೆ. ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆ,ಅಡಿಕೆ ಮತ್ತು ಜನಪದ ಕಲೆಗಳಿಂದ ‘ಶಿರಸಿ’ ಹಲವಾರು ವಿಷಯಗಳ ಬ್ರಾಂಡ್ ಅಂಬಾಸಿಡರ್ ಎನ್ನಬಹುದು.
ಒಂದು ವರ್ಷ ಜಾತ್ರೆಯ ಸಂಭ್ರಮದ ಜೊತೆ ಮಾರಿಕಾಂಬೆಯ ಭಕ್ತಿಯಲ್ಲಿ ಪುನೀತರಾಗುವ ಶಿರಸಿಗರು ಮರುವರ್ಷ ಹೋಳಿಯ ಬಣ್ಣದಲ್ಲಿ ಮಿಂದೇಳುತ್ತಾರೆ. ಆದರೆ ಇದೇ ಹೋಳಿಯ ಹಿಂದಿನ ಮೂರು ದಿನಗಳಲ್ಲಿ ಶಿರಸಿಯ ಮತ್ತೊಂದು ಅನನ್ಯತೆ ಕಾಣಸಿಗುತ್ತವೆ.
ಆ ಅನನ್ಯತೆಯ ಹೆಸರು ‘ಬೇಡರವೇಷ’. ನವಿಲು ಗರಿಗಳನ್ನು ಕಟ್ಟಿಕೊಂಡು, ವಿಶೇಷ ರೀತಿಯ ವೇಷಭೂಷಣಗಳನ್ನು ತೊಟ್ಟು, ಬಣ್ಣಗಳಿಂದ ಅದ್ಭುತವಾದ ಮುಖಚಿತ್ರ ಬಳಿದುಕೊಂಡು, ಹಲಗೆಯ ತಾಳಕ್ಕೆ ಹೆಜ್ಜೆ ಹಾಕುವ ವಿಶಿಷ್ಟ ಕುಣಿತವೇ ‘ಬೇಡರವೇಷ’. ಬೇಡರವೇಷಧಾರಿಯ ಹಿಂದೆ ಇಬ್ಬರು ಹಗ್ಗದೊಂದಿಗೆ ಆತನನ್ನು ಹಿಡಿದುಕೊಂಡು ನಿಯಂತ್ರಿಸುತ್ತಿರುತ್ತಾರೆ. ಇವರೀರ್ವರ ವೇಷಭೂಷಣಗಳೂ ಸಹ ವಿಶೇಷ ರೀತಿಯಲ್ಲಿರುತ್ತದೆ. ಇಂತಹ ವಿಶೇಷ ಆಚರಣೆ ಶಿರಸಿಯಲ್ಲೇ ಹುಟ್ಟಿದ್ದು, ಮುನ್ನೂರು ವರ್ಷಗಳಿಂದ ಶಿರಸಿಗರಿಂದ, ಶಿರಸಿಯಲ್ಲಷ್ಟೇ ಮಾಡಲ್ಪಡುವ ಮತ್ತೆಲ್ಲೂ ಕಾಣಸಿಗದ ರುದ್ರ ರಮಣೀಯ ನೃತ್ಯ ಕಲೆಯಾಗಿದೆ. ವಿಶೇಷ ವೇಷಭೂಷಣ, ರೌದ್ರರೂಪದ ಮುಖಾಲಂಕಾರ, ಕೋಡುಗಳುಳ್ಳ ಕಿರೀಟ, ನೋಟುಗಳ ಮಾಲೆ, ಕೈಯಲ್ಲಿ ಝಳಪಿಸುವ ಕತ್ತಿ, ಇವೆಲ್ಲವನ್ನೂ ನೋಡಿದರೆ ಒಮ್ಮೆ ಎದೆಯಲ್ಲಿ ನಡುಕ ಹುಟ್ಟುವುದು ಅಕ್ಷರಶಃ ಸತ್ಯ.
ಬೇಡರ ವೇಷದ ಹಿನ್ನಲೆ ಹೇಳುವ ಹಲವಾರು ಕಥೆಗಳು ಬಾಯಿಂದ ಬಾಯಿಗೆ ಹರಿದುಬಂದಿದೆ. ಸೋದೆ ಅರಸರು ಶಿರಸಿಯನ್ನು ಆಳುವಾಗ ಶಿರಸಿಗೆ ‘ಕಲ್ಯಾಣ ಪಟ್ಟಣ’ ಎಂಬ ಹೆಸರಿತ್ತು. ಬಹಮನಿ ಸುಲ್ತಾನರಿಂದ ನಿರಂತರವಾಗಿ ದಾಳಿಗೊಳಗಾದಾಗ ‘ಮಲ್ಲೇಶಿ’ ಎಂಬ ಬೇಡನನ್ನು ಸುಲ್ತಾನರ ಸೈನಿಕರನ್ನು ಹೆದರಿಸುವ ಕೆಲಸಕ್ಕೆ ನೇಮಿಸುತ್ತಾರೆ. ಅವನು ಬಣ್ಣವನ್ನು ಹಚ್ಚಿಕೊಂಡು ಕುಣಿಯುತ್ತಾ, ಒಂದಿಷ್ಟು ಸಂಗಡಿಗರೊಂದಿಗೆ ಹಲಗೆಯನ್ನು ಬಾರಿಸುತ್ತಾ ಸೈನಿಕರನ್ನು ಹೆದರಿಸುತ್ತಾನೆ. ಮೊದಮೊದಲು ನಿಷ್ಠೆಯಿಂದ ಕೆಲಸವನ್ನು ಮಾಡುತ್ತಿದ್ದವನು, ಅಧಿಕಾರದ ಮದದಿಂದ ಊರಿನವರಿಗೆ ಪೀಡಿಸಲು ಪ್ರಾರಂಭ ಮಾಡುತ್ತಾನೆ. ಗಂಡನಿಂದ ಆಗುತ್ತಿರುವ ಉಪಟಳವನ್ನು ನೋಡಲಾಗದೇ ಆತನ ಹೆಂಡತಿಯಾದ ರುದ್ರಾಂಬಿಕೆಯು ಹೋಳಿ ಹಬ್ಬದ ಹಿಂದಿನ ದಿನ ಮಲ್ಲೇಶಿಯು ಕುಣಿಯುತ್ತಿರುವಾಗ ಗಂಡನ ಕಣ್ಣಿಗೆ ಖಾರದ ಪುಡಿಯನ್ನು ಹಾಕುತ್ತಾಳೆ. ಇದರಿಂದ ಸಿಟ್ಟಿಗೆದ್ದ ಮಲ್ಲೇಶಿಯು ಅವಳನ್ನು ಸಾಯಿಸಲು ಮುಂದಾಗುತ್ತಾನೆ. ನಂತರ ಊರವರೆಲ್ಲ ನಿರ್ಧರಿಸಿ ಉರಿಯುವ ಬೆಂಕಿಗೆ ಮಲ್ಲೇಶಿಯನ್ನು ತಳ್ಳುತ್ತಾರೆ. ರುದ್ರಾಂಬಿಕೆಯೂ ಸತಿ ಪದ್ಧತಿಯ ಮೊರೆ ಹೋಗುತ್ತಾಳೆ. ರುದ್ರಾಂಬಿಕೆಯ ತ್ಯಾಗವನ್ನು ನೆನೆಯುವ ಸಲುವಾಗಿ ಎರಡು ವರ್ಷಗಳಿಗೊಮ್ಮೆ ಬೇಡರ ವೇಷವನ್ನು ಆಚರಿಸುವ ಪದ್ಧತಿ ನಡೆದುಬಂದಿದೆ.
ಬೇಡರವೇಷದ ತಯಾರಿ ಶಿರಸಿಯಲ್ಲಿ ಹೋಳಿ ಹಬ್ಬಕ್ಕೆ ಮೊದಲು ಒಂದು ತಿಂಗಳಿಂದಲೇ ಪ್ರಾರಂಭವಾಗುತ್ತದೆ. ನಗರದ ಹಲವಾರು ರಸ್ತೆಗಳಲ್ಲಿ ಕುಣಿತವನ್ನು ಮಾಡುತ್ತಾ, ತಯಾರಿಯನ್ನು ನಡೆಸುತ್ತಾರೆ. ರಾತ್ರಿಯ ಸಮಯದಲ್ಲಿ ಹಲಗೆಯ ಸದ್ದಿನ ಜೊತೆ ವೇಷ ಕಟ್ಟುವವರ ಕುಣಿತ ನಗರದೆಲ್ಲೆಡೆ ಕಾಣಸಿಗುತ್ತದೆ. ಈ ಬಾರಿ ಬೇಡರವೇಷ ಕುಣಿತವು ಮಾ.10ರಿಂದ ಪ್ರಾರಂಭವಾಗಲಿದ್ದು, ಮಾ.13ರವರೆಗೆ ನಡೆಯಲಿದ್ದು, ಮಾ. 14ರಂದು ಕಾಮದಹನದೊಂದಿಗೆ ಹೋಳಿಹಬ್ಬವನ್ನು ಆಚರಿಸುವ ಮೂಲಕ ಕೊನೆಗೊಳ್ಳಲಿದೆ. ಪ್ರತಿ ಬೇಡರ ವೇಷದ ತಂಡವು ತಾಯಿ ಮಾರಿಕಾಂಬೆಯನ್ನು ಸ್ಮರಿಸಿ, ಪೂಜೆ ಸಲ್ಲಿಸಿ ತಮ್ಮ ಸ್ಥಾನಗಳಿಂದ ಹೊರಟು, ಮಾರಿಕಾಂಬಾ ದೇವಸ್ಥಾನದ ಮುಂಭಾಗದಲ್ಲಿ ಆಗಮಿಸಿ ಕುಣಿತ ಪ್ರದರ್ಶನ ನೀಡುವುದು ಒಂದು ಪದ್ಧತಿಯಾಗಿದೆ. ಇನ್ನುಳಿದಂತೆ ನಗರದ ಹಲವಾರು ಮುಖ್ಯ ವೃತ್ತಗಳಲ್ಲಿ ಕುಣಿತವನ್ನು ಅದ್ದೂರಿಯಾಗಿ ನಡೆಸುತ್ತಾರೆ. ಇಂತಹ ವಿಶೇಷ ಕಲೆಯನ್ನು ನೋಡಲು ಶಿರಸಿಗರಷ್ಟೇ ಅಲ್ಲದೇ ಹೊರಜಿಲ್ಲೆಗಳಿಂದಲೂ ಜನರು ಆಗಮಿಸುತ್ತಾರೆ. ಲಕ್ಷಾಂತರ ಜನರು ಎರಡು ವರ್ಷಗಳಿಗೊಮ್ಮೆ ನಡೆಯುವ ಅದ್ಭುತ ಕಲೆಗೆ ಸಾಕ್ಷಿಯಾಗುತ್ತಾರೆ. ಶಿರಸಿಗೆ ಒಂದು ಅನನ್ಯತೆಯನ್ನು ನೀಡಿ ತನ್ಮೂಲಕ ಶಿರಸಿಯನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಶ್ರೀಮಂತವಾಗಿಸಿದ ರುದ್ರ ರಮಣೀಯ ಬೇಡರವೇಷವನ್ನು ನಾವೆಲ್ಲ ಕಣ್ತುಂಬಿಕೊಳ್ಳೋಣ ಬನ್ನಿ.