ಹೊನ್ನಾವರ: ಅಸ್ತಿತ್ವವಿಲ್ಲದ ಅಸಮರ್ಪಕ ಅರಣ್ಯ ಹಕ್ಕು ಸಮಿತಿಯಿಂದ ಮೂರು ತಲೆಮಾರಿನ ಅಂದರೆ ೧೯೩೦ ಇಸವಿ ಪೂರ್ವದಿಂದ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬಂಧಿಸಿ ದಾಖಲೆಗಳಿಗೆ ಆಗ್ರಹಿಸಿ ನೋಟಿಸ್ ನೀಡುವ ಪ್ರಕ್ರಿಯೆಯಿಂದ ಅರಣ್ಯವಾಸಿಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದಿಂದ ಉಚ್ಚನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲು ಹೋರಾಟಗಾರರ ವೇದಿಕೆಯು ನಿರ್ಧರಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಜ.೨೨ ರಂದು ಹೊನ್ನಾವರ ತಾಲೂಕಿನ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಗ್ರೀನ್ ಕಾರ್ಡ ಪ್ರಮಖರ ತರಬೇತಿ ಶಿಬಿರವನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪುನರ್ ಪರಿಶೀಲನೆ ಜರುಗುತ್ತಿದ್ದು ನಾಮನಿರ್ದೇಶನ ಸದಸ್ಯರೆ ಇಲ್ಲದೆ ಸಮಿತಿಗೆ ಕಾನೂನಾತ್ಮಕ ಮೌಲ್ಯತೆ ಇರುವುದಿಲ್ಲ. ಸಮಿತಿ ತೆಗೆದುಕೊಂಡ ನಿರ್ಣಯ ಕಾನೂನು ಭಾಹಿರವಾಗಿದ್ದು ಇರುತ್ತದೆ ಎಂದು ಅವರು ಸಭೆಯಲ್ಲಿ ಉಲ್ಲೇಖಿಸಿದ್ದರು.
ಶಿಬಿರದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ಮಹೇಶ ನಾಯ್ಕ, ನಗರಾಧ್ಯಕ್ಷ ಸುರೇಶ ಮೇಸ್ತಾ ತಾಂಡೇಲ್, ಮಾದೇವ ಮರಾಠಿ, ಹೇಮಲತಾ ನಾಯ್ಕ, ಜಾನ್ ಸಾವೇರ್ ಓಡ್ತಾ, ರತ್ನಾಕರ ನಾಯ್ಕ ಹಿರೇಬೈಲ್, ಮಾರುತಿ ನಾಯ್ಕ, ಹನುಮಂತ ಗಣಪ ಗೌಡ, ಸಂತೋಷ ಅನಂತವಾಡಿ, ಗಣಪತಿ ನಾಯ್ಕ, ಥಾಮಸ್ ಲೋಬೊ, ಮಾರುತಿ ನಾಯ್ಕ, ದೇವು ದಾಕು ಮರಾಠಿ, ಶಾಂತಾ ಗಂಗಾ ಗೌಡ, ಗಣೇಶ ನಾಯ್ಕ, ಸುಧಾಕರ ದೇಶಭಂಡಾರಿ, ಶಿವರಾಮ ನಾಯ್ಕ, ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಆಕ್ಷೇಪಣೆ:
ಕಾನೂನಿಗೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿಗಳು ಪುನರ್ ಪರಿಶೀಲನೆ ಜರುಗುತ್ತಿರುವುದಕ್ಕೆ ಹೋರಾಟಗಾರರ ವೇದಿಕೆಯು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ರಾಜ್ಯ ಅರಣ್ಯ ಭೂಮಿ ಹಕ್ಕು ಮೇಲ್ವೀಚಾರಣಾ ಸಮಿತಿಗೆ ಆಕ್ಷೇಪ ಪತ್ರ ಸಲ್ಲಿಸಿದ್ದು ಇರುತ್ತದೆ. ಆಕ್ಷೇಪಕ್ಕೆ ಮಾನ್ಯತೆ ದೊರಕಬಹುದೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.