ಹೊನ್ನಾವರ : ತಾಲೂಕಿನ ಬಳಕೂರು ಗ್ರಾಮದಲ್ಲಿ ಭತ್ತದ ಬೆಳೆಗೆ ಗಂಟು ನೊಣವಿನ ಬಾಧೆಯಾಗಿದ್ದು, ಸ್ಥಳಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ. ಅರ್ಜುನ್ ಆರ್. ಎಸ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಪಾಂಡಪ್ಪ ಲಂಬಾಣಿ ಇವರನೊಳಗೊಂಡ ತಂಡವು ಬಾಧೆಗೊಳಗಾದ ಕ್ಷೇತ್ರಕ್ಕೆ ಭೇಟಿ ನೀಡಿ ರೈತರಿಗೆ ಕೀಟ ಹತೋಟಿ ಮಾಡಲು ಸಲಹೆ ನೀಡಿದರು.
ಕೀಟ ಬಾಧೆ ಹೆಚ್ಚಾಗಲು ಕಾರಣ:
ಈ ಕೀಟವು ತಡವಾಗಿ ಬಿತ್ತನೆ ಮಾಡಿದ ಭತ್ತದ ಗದ್ದೆಯಲ್ಲಿ ಅದರಲ್ಲಿಯೂ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಮರಿಹುಳುಗಳು ಪೈರಿನ ಕಾಂಡದ ಕೆಳಭಾಗದಲ್ಲಿ ಕೊರೆಯುವುದರಿಂದ ಮಧ್ಯದ ಎಲೆಯು ಬಿಳಿಯ ಕೊಳವೆಯಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಈ ನೊಣವನ್ನು ಕೊಳವೆ ನೊಣವೆಂದು ಕರೆಯುತ್ತಾರೆ. ಈ ಹುಳುವಿನ ಬಾಧೆ ಹೆಚ್ಚಾದಾಗ ಸಸಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮತ್ತು ತೆನೆಗಳು ಉತ್ಪತ್ತಿಯಾಗದೆ ಬೆಳೆ ನಷ್ಟವಾಗುತ್ತದೆ. ಈ ಹುಳು ಸಸಿ ಮಡಿಯಲ್ಲಿ ಕಂಡು ಬಂದರೂ ನಾಟಿ ಮಾಡಿದ ೩೦-೪೦ ದಿನಗಳವರೆಗೆ ಇರುತ್ತದೆ. ತಡವಾಗಿ ನಾಟಿಮಾಡಿದ ಗದ್ದೆಯಲ್ಲಿ ಹೆಚ್ಚಿನ ಬಾಧೆ ಕಂಡುಬರುತ್ತದೆ.
ಹತೋಟಿ ಕ್ರಮಗಳು:
ಬಿತ್ತನೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು ಮತ್ತು ರಸಗೊಬ್ಬರಗಳನ್ನು ಸರಿಯಾದ ಪ್ರಮಾಣದಲ್ಲಿ ಹಂತ ಹಂತವಾಗಿ ಕೊಡಬೇಕು.
ಬಿತ್ತನೆಯಾದ ೧೫-೨೦ ದಿನದ ಒಳಗೆ ಬೆಳೆಯು ಕೀಟದ ಬಾಧೆಗೆ ಹೆಚ್ಚಾಗಿ ಒಳಗಾಗುವ ಸಾಧ್ಯತೆ ಇರುವುದರಿಂದ ಆ ಸಮಯದಲ್ಲಿ ಯೂರಿಯಾ ಗೊಬ್ಬರ ನೀಡದಿರುವುದು ಸೂಕ್ತ.
ಗದ್ದೆಯಲ್ಲಿರುವ ನೀರನ್ನು ೫-೭ ದಿನಗಳವರೆಗೆ ಖಾಲಿ ಮಾಡುವುದರಿಂದ ಈ ಕೀಟದ ಹಾವಳಿ ಕಡಿಮೆ ಮಾಡಬಹುದು.
ಈ ಕೀಟವನ್ನು ಶೇ ೫ ರ ಬೇವಿನ ಬೀಜದ ಕಷಾಯ ಅಥವಾ ಪ್ರತಿ ಲೀ ನೀರಿಗೆ ೨-೩ ಮಿ.ಲೀ ಬೇವಿನಾಧಾರಿತ ಕೀಟನಾಶಕಗಳನ್ನು ಉಪಯೋಗಿಸಿ ಹತೋಟಿ ಮಾಡಬಹುದು
ಕೀಟನಾಶಕಗಳಾದ ಕ್ಲೋರೊಪೈರಿಪಾಸ್ ೨೦ ಇಸಿ ೨ ಮಿ.ಲೀ/ಕ್ವಿನಾಲಪಾಸ್ ೨ಮಿ.ಲೀ ಅಥವಾ ಪಿಪ್ರೊನಿಲ್ ೫ ಇಸಿ ೨ ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹರಳು ರೂಪದ ಕೀಟನಾಶಕಗಳಾದ ಪ್ರಿಪ್ರೊನಿಲ್ ೦.೩ ಗ್ರಾಂ ಅಥವಾ ಕಾರ್ಬೊಪ್ಯೂರಾನ್ ೩ ಉ ೧೦ ಞg ಗಳನ್ನು ಪ್ರತಿ ಎಕರೆಗೆ ಹಾರುವುದರಿಂದ ಹತೋಟಿ ಮಾಡಬಹುದು.