ಸಿದ್ದಾಪುರ: ಆರ್ಯ, ಈಡಿಗ, ನಾಮಧಾರಿ, ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ರಾಘವೇಂದ್ರ ಮಠದಲ್ಲಿ ರವಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸಮಾಜದ ನಿವೃತ್ತ ಸೈನಿಕರು, ನೌಕರರು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ 90% ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಪಟ್ಟಣದ ರಾಘವೇಂದ್ರ ಮಠದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮಕ್ಕೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿ ಮಾತನಾಡಿ, ಸಮಾಜದ ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂದಿನ ಸನ್ಮಾನ ಹಾಗೂ ಪುರಸ್ಕಾರ ನಿಮ್ಮೆಲ್ಲರ ಜವಾಬ್ದಾರಿ ಹೆಚ್ಚಿಸಿದೆ. ಸಮಾಜಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ನೀಡುತ್ತೇನೆ. ಸಮಾಜದ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನಾವೆಲ್ಲರೂ ನೋಡಿಕೊಳ್ಳುತ್ತೇವೆ. ನಮ್ಮ ಸಮಾಜದ ಜತೆ ಇತರ ಸಮುದಾಯದವರನ್ನು ಗೌರವಿಸಬೇಕು. ಕ್ಷೇತ್ರದ ಶಾಸಕನಾಗಿ ನನ್ನ ಸಮಾಜದ ಜತೆ ಎಲ್ಲಾ ಸಮುದಾಯವನ್ನು ಪ್ರೀತಿಸುವ ಶಾಸಕ ನಾನಾಗುತ್ತೇನೆ ಎಂದರು.
ಸಂಘದ ಅಧ್ಯಕ್ಷ ರವಿ ಕೆ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಾಗರ ತಾಲೂಕಾ ದಂಡಾಧಿಕಾರಿ ಚಂದ್ರಶೇಖರ ನಾಯ್ಕ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಗೋಳಗೋಡ, ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಜಿ.ನಾಯ್ಕ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಜಿ.ಎಲ್.ಶ್ಯಾಮಸುಂದರ ಸ್ವಾಗತಿಸಿದರು. ಶಿಕ್ಷಕ ಟಿ.ಕೆ.ನಾಯ್ಕ ಸಂಘದ ರೂಪುರೇಷೆಗಳನ್ನು ವಿವರಿಸಿದರು. ಶಿಕ್ಷಕಿ ಸುಧಾರಾಣಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.