ದಾಂಡೇಲಿ : ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಶ್ರಯದಡಿ ನಗರದ ಸುಭಾಷ್ ನಗರದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಭಾನುವಾರ ಚಾಲನೆಯನ್ನು ನೀಡಲಾಯಿತು.
ಗುರುಸ್ವಾಮಿ ಮೋಹನ ಸನದಿ ಪಂದ್ಯಾವಳಿಗೆ ಚಾಲನೆಯನ್ನು ನೀಡಿ, ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಈ ಭಾಗದ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ನಗರದ ಕ್ರೀಡಾ ಕ್ಷೇತ್ರದ ಉಜ್ವಲ ಪ್ರಗತಿಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕೊಡುಗೆ ಅಪಾರವಾಗಿದೆ ಎಂದು ಹೇಳಿ ಪಂದ್ಯಾವಳಿಗೆ ಶುಭವನ್ನು ಕೋರಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಸದಸ್ಯರಾದ ರೋಷನ ಜಿತ್ ಅವರು ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ನಗರದ ಅನೇಕ ಮಕ್ಕಳು ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಮೂಲ ಕಾರಣ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಪರಿಶ್ರಮ. ದಾಂಡೇಲಿಯಲ್ಲಿ ಬ್ಯಾಡ್ಮಿಂಟನ್ ಕ್ರೀಡೆಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಭದ್ರ ತಳಪಾಯವನ್ನು ಹಾಕಿಕೊಟ್ಟಿದೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ನವೀನ ಕಾಮತ್ ಮತ್ತು ಶಿವಾನಿ ಸಂಜಯ ಪಡವಳ್ಕರ ಭಾಗವಹಿಸಿ ಪಂದ್ಯಾವಳಿಗೆ ಶುಭಕೋರಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇಂದ ಪ್ರತಿ ವರ್ಷವೂ ವಿವಿಧ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ನಗರದ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ಕೊಡುವ ಕಾರ್ಯವನ್ನು ಕಳೆದ ಅನೇಕ ವರ್ಷಗಳಿಂದ ಮಾಡುತ್ತಾ ಬಂದಿರುವ ಫಲವಾಗಿ, ಇಂದು ದಾಂಡೇಲಿಯ ಅನೇಕ ಮಕ್ಕಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆ ತಂದಿದೆ. ಈ ಪಂದ್ಯಾವಳಿಯಲ್ಲಿ ನಿರೀಕ್ಷೆಗೂ ಮೀರಿ ಕ್ರೀಡಾಪಟುಗಳು ಭಾಗವಹಿಸಿರುವುದು ಪಂದ್ಯಾವಳಿಗೆ ಹೊಸ ಮೆರುಗು ತಂದಿದೆ ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಸುರೇಶ್ ಕಾಮತ್ ಸ್ವಾಗತಿಸಿದರು. ಕವಿತಾ ಕಾಮತ್ ವಂದಿಸಿದರು. ಕುಮಾರ್ ಕರಗಯ್ಯ ಮತ್ತು ವಿನೋದ ಬಾಂದೇಕರ ಕಾರ್ಯಕ್ರಮವನ್ನು ನಿರೂಪಿಸಿದರು.
9 ವಿಭಾಗಗಳಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಪಂದ್ಯಾವಳಿಯ ಯಶಸ್ಸಿಗೆ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಇದರ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಪದಾಧಿಕಾರಿಗಳು ಮತ್ತು ಮಹಿಳಾ ಸದಸ್ಯರು ಶ್ರಮಿಸುತ್ತಿದ್ದಾರೆ.