- ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ಅಧಿಕಾರಿಗಳೆಂದರೆ ಹೀಗಿರಬೇಕು. ತನ್ನ ಕೈ ಕೆಳಗಿನ ಸಿಬ್ಬಂದಿಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಹಿರಿಯಣ್ಣನಂತೆ ಮಾರ್ಗದರ್ಶನ ನೀಡುತ್ತಾ, ಸಹೋದ್ಯೋಗಿಗಳಿಗೆ ಅಕ್ಕರೆಯ ಸಹೋದರನಂತೆ ಸಹಕಾರವನ್ನು ನೀಡುತ್ತಾ ಕಳೆದ 35 ವರ್ಷಗಳಿಂದ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಾ ಬಂದವರು. ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾತ್ರವಲ್ಲದೆ ತನ್ನ ಸೇವಾ ಬದ್ಧತೆ ಹಾಗೂ ಜನಸ್ನೇಹಿ ನಡುವಳಿಕೆಯ ಮೂಲಕ ಜನ ಮೆಚ್ಚುಗೆಯನ್ನು ಪಡೆದ ಅಧಿಕಾರಿ ಅವರು.
ದಾಂಡೇಲಿಯ ಟಿಂಬರ್ ಡಿಪೋ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅನುಪಮ ಸೇವೆಯನ್ನು ಸಲ್ಲಿಸಿ ಶನಿವಾರ ನಿವೃತ್ತರಾದ ಜಿ.ಕೆ.ಶೇಟ್. ತಮ್ಮ ಇಷ್ಟು ವರ್ಷಗಳ ಸೇವಾ ಅವಧಿಯಲ್ಲಿ ಎಲ್ಲಿಯೂ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ, ಕರ್ತವ್ಯ ಬದ್ಧತೆಯಿಂದ ಕಾರ್ಯನಿರ್ವಹಿಸಿದ ಅಪರೂಪದ ಅಪೂರ್ವ ವ್ಯಕ್ತಿತ್ವವನ್ನು ಹೊಂದಿದವರು ಜಿ.ಕೆ.ಶೇಟ್.
ಭಟ್ಕಳದ ಕಮಲಾಕರ ಮಂಜುನಾಥ ಶೇಟ್ ಹಾಗೂ ಇಂದುಮತಿ ದಂಪತಿಗಳ ಸುಪುತ್ರರಾದ ಜಿ.ಕೆ.ಶೇಟ್ ನ.27, 1964ರಲ್ಲಿ ಜನಿಸಿದರು. ಇಬ್ಬರು ಸಹೋದರಿಯರು ಹಾಗೂ ಒಬ್ಬ ಸಹೋದರರನ ಜೊತೆ ಆಡಿ ಬೆಳೆದ ಜಿ.ಕೆ.ಶೇಟ್ ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ದಿನಗಳಲ್ಲಿ ಅತ್ಯುತ್ತಮ ಕಬ್ಬಡಿ ಆಟಗಾರನಾಗಿ ಗಮನ ಸೆಳೆದವರು. ಪ್ರಾಥಮಿಕದಿಂದ ಹಿಡಿದು ಪಿಯುಸಿವರೆಗೆ ಭಟ್ಕಳದಲ್ಲಿ ಶಿಕ್ಷಣವನ್ನು ಪಡೆದ ಜಿ.ಕೆ.ಶೇಟ್ ಆನಂತರ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮೋ ಇನ್ ಮೆಕಾನಿಕಲ್ ಶಿಕ್ಷಣವನ್ನು ಪಡೆದರು.
ಮೆಕಾನಿಕಲ್ ಇಂಜಿನಿಯರಿಂಗ್ ಆಗಬೇಕೆನ್ನುವ ಕನಸನ್ನು ಇಟ್ಟುಕೊಂಡಿದ್ದ ಜಿ.ಕೆ.ಶೇಟ್ ಸುಮ್ಮನೆ ನೋಡೋಣ, ಇರಲಿ ಎಂದು ಅರ್ಜಿ ಹಾಕಿದ್ದೆ ಹಾಕಿದ್ದು, 1988ರಲ್ಲಿ ಅರಣ್ಯ ಇಲಾಖೆ ಉದ್ಯೋಗವನ್ನು ನೀಡಿತ್ತು. ಅರಣ್ಯ ಇಲಾಖೆಗೆ ನೇಮಕಗೊಂಡ ಜಿ.ಕೆ.ಶೇಟ್ ಅವರು 1989 ರ ಏಪ್ರಿಲ್ ನಿಂದ 1990 ಮಾರ್ಚ್ ವರೆಗೆ ಹಳಿಯಾಳ ತಾಲೂಕಿನ ತಟ್ಟಿಹಳ್ಳ ಅರಣ್ಯ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದರು.
ತರಬೇತಿ ಪಡೆದ ಬಳಿಕ ಅರಣ್ಯ ಇಲಾಖೆಯ ಧಾರವಾಡ ವಿಭಾಗದ ಹುಬ್ಬಳ್ಳಿ ವಲಯದಲ್ಲಿ ಉಪ ವಲಯರಣ್ಯಾಧಿಕಾರಿಯಾಗಿ 1990 ರಿಂದ 1991 ರವರೆಗೆ ಸೇವೆಯನ್ನು ಸಲ್ಲಿಸಿದರು. ಅಲ್ಲಿಂದ 1991 ರಿಂದ 1994 ರವರೆಗೆ ಹೊನ್ನಾವರ ವಿಭಾಗದ ಮಂಕಿ ವಲಯದಲ್ಲಿ, 1994 ರಿಂದ 1998ರ ವರೆಗೆ ಕಾರವಾರದ ಸೀಬರ್ಡಿನಲ್ಲಿ, 1998 ರಿಂದ 2005 ರವರೆಗೆ ಭಟ್ಕಳ ವಲಯದಲ್ಲಿ ಉಪ ವಲಯಾರಣ್ಯಾಧಿಕಾರಿಯಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದರು.
2005ರಲ್ಲಿ ವಲಯಾರಣ್ಯಾಧಿಕಾರಿಯಾಗಿ ಪದೋನ್ನತಿಗೊಂಡು ಮಂಗಳೂರಿನ ಕರ್ನಾಟಕ ಗೇರು ಅಭಿವೃದ್ಧಿ ನಿಗಮದಲ್ಲಿ 2005 ರಿಂದ 2008 ವರೆಗೆ ಸೇವೆಯನ್ನು ಸಲ್ಲಿಸಿದ್ದಾರೆ. 2006 ರಿಂದ 2008 ರವರೆಗೆ ಸೀಬರ್ಡ್ ಕಾರವಾರ, 2008 ರಿಂದ 2012 ರವರೆಗೆ ಕದ್ರಾ ವಲಯದ ಅರಣ್ಯಾಧಿಕಾರಿಯಾಗಿ, 2011 ರಿಂದ 2014ರ ವರೆಗೆ ಕಾರವಾರದ ಸಾಮಾಜಿಕ ಅರಣ್ಯ ವಿಭಾಗದಲ್ಲಿ, 2014 ರಿಂದ 2015ರ ವರೆಗೆ ಹೊನ್ನಾವರ ವಲಯದಲ್ಲಿ, 2015 ರಿಂದ 2019 ರವರೆಗೆ ಹಟ್ಟಿಕೇರಿ ಟಿಂಬರ್ ಡಿಪೋದಲ್ಲಿ, 2019ರಲ್ಲಿ ನಾಲ್ಕು ತಿಂಗಳು ಮಂಗಳೂರಿನ ಸಾಮಾಜಿಕ ಅರಣ್ಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಭಡ್ತಿಗೊಂಡು ಬೀದರ್ ಅರಣ್ಯ ತರಬೇತಿ ಕೇಂದ್ರಕ್ಕೆ ವರ್ಗಾವಣೆಯಾಗಿ ಅಲ್ಲಿ ಎಂಟು ತಿಂಗಳು ಸೇವೆಯನ್ನು ಸಲ್ಲಿಸಿದರು. 2021 ರಿಂದ 2022 ರವರೆಗೆ ಕುಮಟಾ ಉಪ ವಿಭಾಗದಲ್ಲಿ, 2022 ರಿಂದ 2023ರ ವರೆಗೆ ದಾಂಡೇಲಿ ಉಪ ವಿಭಾಗದಲ್ಲಿ ಸೇವೆಯನ್ನು ಸಲ್ಲಿಸಿ ಆನಂತರ ಖಾನಾಪುರ ಉಪ ವಿಭಾಗಕ್ಕೆ ವರ್ಗಾವಣೆಯಾಗಿದ್ದರು. ಅಲ್ಲಿಂದ ದಾಂಡೇಲಿಯ ಟಿಂಬರ್ ಡಿಪೋ ಇಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಳೆದ ಕಳೆದ ಒಂದು ವರ್ಷದಿಂದ ಜನಸ್ನೇಹಿಯಾಗಿ ಅರಣ್ಯ ಇಲಾಖೆಯ ಆದರ್ಶ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಜಿ.ಕೆ.ಶೇಟ್ ಕೆಲಸ ಮಾಡಿದ್ದ ಎಲ್ಲ ಪ್ರದೇಶಗಳಲ್ಲಿ ತಮ್ಮ ಜನಸ್ನೇಹಿ ನಡವಳಿಕೆಯಿಂದಲೇ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ಬಂದವರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಇರುವ ಆಪ್ತತೆ ಮತ್ತು ಆತ್ಮೀಯ ನಡವಳಿಕೆ, ಕೆಲಸದಲ್ಲಿರುವ ಶಿಸ್ತು, ಅಚ್ಚು ಕಟ್ಟುತನ, ವೇಗ ಮತ್ತು ಪಾರದರ್ಶಕತೆಯ ಕಾರ್ಯನಿರ್ವಹಣೆ ಅನುಕರಣೀಯ ಮತ್ತು ಅಭಿನಂದನೀಯ.
ಮೇಲಾಧಿಕಾರಿಗಳಿಂದ ಒಂದು ದಿನವೂ ಬೈಗುಳ ತೆಗೆದುಕೊಳ್ಳದ, ಮೇಲಾಧಿಕಾರಿಗಳಿಂದ ಸದಾ ಮೆಚ್ಚುಗೆಗೆ ಪಾತ್ರರಾಗುವ ರೀತಿಯಲ್ಲಿ ಹಾಗೂ ಅನ್ನ ಮತ್ತು ಬದುಕು ನೀಡಿದ ಇಲಾಖೆಗೆ ಅತ್ಯಂತ ಕೃತಜ್ಞತಾ ಬದ್ಧನಾಗಿ ನಿಷ್ಠೆಯಿಂದ ಸೇವೆ ಮಾಡಬೇಕೆಂದು ಬಯಸಿ, ಪ್ರಾಂಜಲ ಗುಣ ಮನಸ್ಸಿನಿಂದ ಸೇವೆಯನ್ನು ಸಲ್ಲಿಸಿದವರು ನಗುಮೊಗದ ಸರಳ ಸಹೃದಯಿ ಅಧಿಕಾರಿ ಜಿ.ಕೆ.ಶೇಟ್.
ತನಗೆ ವಹಿಸಿದ ಜವಾಬ್ದಾರಿಯನ್ನು ನಿಗದಿತ ಕಾಲಮಿತಿಯೊಳಗಡೆ ಮುಗಿಸಿ ಮೇಲಾಧಿಕಾರಿಗಳಿಂದ ಭೇಷ್ ಎನಿಸಿಕೊಂಡಿರುವ ಜಿ.ಕೆ.ಶೇಟ್ ತಾಳ್ಮೆಯ ಸಾಕಾರ ಮೂರ್ತಿಯಾಗಿದ್ದಾರೆ. ಮೇಲು-ಕೀಳು ಎನ್ನುವ ಭೇದಭಾವ ಇಲ್ಲದೆ ಎಲ್ಲರನ್ನು ಸಮಾನ ಮನಸ್ಸಿನಿಂದ ನೋಡುವ ಜಿ.ಕೆ.ಶೇಟ್ ಅವರ ವ್ಯಕ್ಯಿತ್ವ ಮತ್ತು ಕಾರ್ಯ ದಕ್ಷತೆ ಸದಾ ಸ್ಮರಣೀಯ ಹಾಗೂ ಮಾದರಿ.
ಇಷ್ಟು ವರ್ಷಗಳ ಸಾರ್ಥಕ ಸೇವೆಗೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಸಿಬ್ಬಂದಿಗಳು ನೀಡಿದ ಸಹಕಾರ ಪ್ರೋತ್ಸಾಹದ ಜೊತೆ ಜೊತೆಗೆ ಧರ್ಮಪತ್ನಿಯವರ ಮನಪೂರ್ವಕ ಸಹಕಾರ, ಇಂಜಿನಿಯರಿಂಗ್ ಪದವಿ ಪಡೆದು ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಉದ್ಯೋಗದಲ್ಲಿರುವ ಮಕ್ಕಳಾದ ದೀಪಕ್ ಮತ್ತು ಚಿರಾಗ್ ಅವರ ಅಪ್ಪುಗೆಯ ಪ್ರೀತಿ ಬಹುಮೂಲ್ಯ ಕಾರಣವಾಗಿದೆ ಎಂದು ಹೇಳುವ ಜಿ.ಕೆ.ಶೇಟ್ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಹುದೊಡ್ಡ ಅವಕಾಶ ದೊರೆತಿರುವುದೇ ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದು ಹೇಳುತ್ತಾರೆ.
ಮೂರು ದಿನದ ಜೀವನದ ಆಟದಲ್ಲಿ ನೂರಾರು ವರ್ಷಗಳು ನೆನಪು ಉಳಿಯುವಂತಹ ಕೆಲಸ ಕಾರ್ಯಗಳು ನಮ್ಮಿಂದಾದಾಗ ಮಾತ್ರ ಬದುಕು ಸಾರ್ಥಕ ಎನ್ನುವ ಜಿ.ಕೆ.ಶೇಟ್ ಅವರಿಗೆ ಅವರ ನಿವೃತ್ತ ಜೀವನಕ್ಕೆ ಹಾರ್ದಿಕ ಶುಭಾಶಯಗಳೊಂದಿಗೆ ಭಗವಂತ ಅವರಿಗೆ ಆಯುರಾರೋಗ್ಯವನ್ನು ಸದಾ ದಯಪಾಲಿಸಲೆನ್ನುವುದೇ ನಮ್ಮ ಪ್ರಾರ್ಥನೆ.