ಭಟ್ಕಳ : ಮುರುಡೇಶ್ವರ ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಯುವಕನನ್ನು ಕರಾವಳಿ ಕಾವಲು ಪಡೆಯ ಪೊಲೀಸರು, ಕೆ.ಎನ್.ಡಿ ಸಿಬ್ಬಂದಿ, ಹಾಗೂ ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿರುವ ಘಟನೆ ರವಿವಾರ ನಡೆದಿದೆ.
ರಕ್ಷಣೆಯಾದ ಯುವಕನನ್ನು ಬೆಂಗಳೂರು ಮೂಲದ
ಪುನೀತ್ ಕೆ(20) ಎಂದು ತಿಳಿದು ಬಂದಿದೆ. ಈತ 4 ಜನರ ತಂಡದೊಂದಿಗೆ ರವಿವಾರ ಮುರುಡೇಶ್ವರ ಪ್ರವಾಸಕ್ಕೆ ಬಂದು,ದೇವರ ದರ್ಶನ ಬಳಿಕ ತನ್ನ ಸ್ನೇಹಿತರೊಂದಿಗೆ ಮುರುಡೇಶ್ವರ ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಪುನೀತ ಸಮುದ್ರದ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗುತ್ತಿರುವ ವೇಳೆ ಕೆ.ಎನ್.ಡಿ ಸಿಬ್ಬಂದಿ ಯೊಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಅಲ್ಲೇ ಸಮೀಪದಲ್ಲಿ ಸಿಬ್ಬಂದಿ ಯೊಗೇಶ ತಂದೆಯ ಪಾತಿ ದೋಣಿ ತೆಗೆದುಕೊಂಡು ಪುನೀತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.
ಕಳೆದ ರವಿವಾರ ಅಷ್ಟೇ ಬೆಂಗಳೂರಿನ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಕಡಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ ನಿನ್ನೆ ಶನಿವಾರ ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಆದರೆ ಪ್ರವಾಸಿಗರ ರಕ್ಷಣೆಗೆ ಅವಶ್ಯ ಇರುವ ಸ್ಪೀಡ್ ಬೋಡ್, ಜೀವರಕ್ಷಕ ಸಾಮಗ್ರಿ ನೀಡಿರಲಿಲ್ಲ. ಇದರಿಂದಾಗಿ ಪುನೀತ್ ಮುಳುಗುವ ವೇಳೆ ಕೆ.ಎನ್.ಡಿ ಸಿಬ್ಬಂದಿ ತನ್ನ ತಂದೆಯ ಪಾತಿದೋಣಿಯ ಮೂಲಕ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.
ಕರಾವಳಿ ಕಾವಲು ಪಡೆಯ ಸಿ.ಪಿ.ಐ ಕುಸುಮದರ ಕೆ. ಮಾರ್ಗದರ್ಶನದಲ್ಲಿ ಕೆ.ಎನ್.ಡಿ ಸಿಬ್ಬಂದಿ ಯೋಗೇಶ ಹರಿಕಾಂತ, ಲಕ್ಷ್ಮಣ ಹರಿಕಾಂತ, ಲೈಫ್ ಗಾರ್ಡ್ ಸಿಬ್ಬಂದಿ ಶೇಖರ ದೇವಾಡಿಗ,ಗಿರಿ ಹರಿಕಾಂತ, ಲೋಹಿತ್ ಹರಿಕಾಂತ, ಮೀನುಗಾರರಾದ ಗುಂಡು ಹರಿಕಾಂತ ಹಾಗೂ ಸಂತೋಷ ಹರಿಕಾಂತ ಕಾರ್ಯಾಚರಣೆಯಲ್ಲಿ ಇದ್ದರು