ಅರಣ್ಯ ಭೂಮಿ ಹಕ್ಕು ಮತ್ತು ಕಸ್ತೂರಿ ರಂಗನ್ ವರದಿಗೆ ಶಾಶ್ವತ ಪರಿಹಾರ ಅವಶ್ಯ: ರವೀಂದ್ರ ನಾಯ್ಕ
ಕುಮಟಾ: ಮಲೆನಾಡು ಮತ್ತು ಕರಾವಳಿ ಭಾಗದ ಜನಸಾಮಾನ್ಯರಿಗೆ ಅರಣ್ಯ ಭೂಮಿ ಹಕ್ಕು ಮತ್ತು ಕಸ್ತೂರಿರಂಗನ್ ವರದಿಯಿಂದ ಉಂಟಾಗುತ್ತಿರುವ ಆತಂಕಕ್ಕೆ ಶಾಶ್ವತ ಪರಿಹಾರ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಅ.೧೩, ರವಿವಾರದಂದು ಕುಮಟಾ ತಾಲೂಕಿನ ಮಾಸ್ತಿಕಟ್ಟಾ ದೇವಸ್ಥಾನದ ಸಭಾಂಗಣದಲ್ಲಿ ನ.೭ರಂದು “ಬೆಂಗಳೂರು ಚಲೋ” ಕಾರ‍್ಯಕ್ರಮದ ಬೃಹತ್ ಅರಣ್ಯವಾಸಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಇಂದು ಭೂಮಿ ಹಕ್ಕಿನಿಂದ ವಂಚಿತವಾಗುವ ಸಂದರ್ಭ ಅರಣ್ಯವಾಸಿಗಳಿಗೆ ಬಂದಲ್ಲಿ, ಕಸ್ತೂರಿ ರಂಗನ್ ವರದಿ ಜಾರಿಯಿಂದ ಜೀವನದ ಬದುಕು ನಾಶವಾಗುವ ಸಂದರ್ಭ ಬಂದಿದೆ. ಇವೆರಡು ಸಮಸ್ಯೆಯಿಂದ ಬದುಕಲು ಇಂದು ಕಾನೂನು ಮತ್ತು ಸಾಂಘಿಕ ಹೋರಾಟ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ ಸ್ವಾಗತಿಸಿದರು. ಸಭೆಯನ್ನು ಉದ್ದೇಶಿಸಿ ಸೀತರಾಮ ನಾಯ್ಕ ಬುಗರಿಬೈಲ್, ಗಜಾನನ ಪಟಗಾರ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ಅಂಕೋಲಾ, ಅರವಿಂದ ಗೌಡ ಅಂಕೋಲ, ಕುಸಂಬಿ ಖಾನ್, ಜಗದೀಶ ಹರಿಕಂತ್ರ, ಶಂಕರ ಗೌಡ ಕಂದೊಳ್ಳಿ ಮಾತನಾಡಿದ್ದರು. ಸಭೆಯಲ್ಲಿ ಪ್ರಕಾಶ ನಾಯ್ಕ ಕತಗಾಲ, ಗಣಪತಿ ಮರಾಠಿ ಕಳವೆ, ಸುನೀಲಾ ಹರಿಕಂತ್ರ ಕಡ್ಲೆ, ಅಯುಬ್ ಉಮರ್ ಬೆಟ್ಕುಳಿ, ಜಗದೀಶ ನಾಯ್ಕ ಹೆಬೈಲ್, ಉಪಸ್ಥಿತರಿದ್ದರು.
೩೦೦೦ ಮಿಕ್ಕಿ ಅಪೀಲ್:
ಅರಣ್ಯವಾಸಿಗಳ ಅಸಮರ್ಪಕ ಜಿಪಿಎಸ್ ಅಫೀಲನ್ನು ಹೋರಾಟಗಾರರ ವೇದಿಕೆಯು ಕುಮಟಾ ತಾಲೂಕಿನಲ್ಲಿ ಸುಮಾರು ೩೦೦೦ ಅರಣ್ಯವಾಸಿಗಳಿಗೆ ಉಚಿತವಾಗಿ ಮಾಡಿ ಕಾನೂನು ನೇರವು ನೀಡಿದೆ ಎಂದು ಅದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.