ಯಲ್ಲಾಪುರ: ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಕಳೆದ ಸಾಲಿನಲ್ಲಿ 40.90ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಭಟ್ಟ ಹೇಳಿದರು.
ಅವರು ಮಲವಳ್ಳಿಯ ರಾಮಲಿಂಗೇಶ್ವರ ಸಭಾಭವನದಲ್ಲಿ ಮಂಗಳವಾರ ಸಂಜೆ ಸಂಘದ 64ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಏಳಿಗೆಗೆ ಸದಸ್ಯರೇ ಜೀವಾಳ. ಸದಸ್ಯರು ಸಂಘದ ಮೂಲಕ ಎಲ್ಲ ವ್ಯವಹಾರ ಮಾಡಬೇಕು. ಅಡಕೆ, ಕಾಳುಮೆಣಸು ಮಾರಾಟ ಮಾಡಿದವರಿಗೆ 4,016,98 ರೂ. ಪ್ರೋತ್ಸಾಹಧನ ನೀಡಲಾಗಿದೆ. ಕಿರಾಣಿ ಗ್ರಾಹಕರಿಗೆ 2,076,21 ರೂ ಪ್ರೋತ್ಸಾಹಧನ ನೀಡಲಾಗಿದೆ ಎಂದರು.
ಸದಸ್ಯರು ಕಳೆದ ವರ್ಷ ಅತಿ ಹೆಚ್ಚಿನ ಪ್ರಮಾಣದ ಅಡಕೆ ವಹಿವಾಟನ್ನು ಸಂಘದ ಮೂಲಕ ಮಾಡಿದ್ದಾರೆ. ನಿಧಿ ಹಾಗೂ ದುಡಿಯುವ ಬಂಡವಾಳದ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ ಎಂದರು. ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಗ್ರಾಮೀಣ ಭಾಗದ ಸಹಕಾರಿ ಸಂಘಗಳು ಹೆಚ್ಚಿನ ವ್ಯವಹಾರ ಮಾಡಿ ಸಂಘದ ಬೆಳವಣಿಗೆಗೆ ಶ್ರಮಿಸಬೇಕೆಂದರು.
ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ, ಮಾವಿನಮನೆ ಸಹಕಾರಿ ಸಂಘದ ಉಪಾಧ್ಯಕ್ಷ ರವಿ ಹುಳಸೆ, ಗ್ರಾ.ಪಂ. ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ, ನಿರ್ದೇಶಕ ಶಂಕರನಾರಾಯಣ ಗಾಂವ್ಕರ, ಮುಖ್ಯಕಾರ್ಯನಿರ್ವಾಹಕ ದತ್ತಾತ್ರೇಯ ನೆಲೆಪಾಲ ಇದ್ದರು.