ದಾಂಡೇಲಿ : ಈ ಬಾರಿ ದಾಂಡೇಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಒಟ್ಟು 76 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಪೈಕಿ 60 ಕಡೆಗಳ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯು ಈಗಾಗಲೇ ನಡೆದಿದೆ. ತಾಲೂಕಿನಲ್ಲಿ ಮಂಗಳವಾರ ಚೌತಿಯ 11ನೇ ದಿನವಾಗಿದ್ದು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ 2024 ರ ಚೌತಿ ಸಂಭ್ರಮ ತೆರೆ ಕಂಡಿದೆ.
ಮಂಗಳವಾರ ನಗರದ ನಗರ ಸಭೆ, ಜೆ.ಎನ್ ರಸ್ತೆ, ಕೆ.ಸಿ ವೃತ್ತ, ಸೋಮಾನಿ ವೃತ್ತದ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ, ಕುಳಗಿ ರಸ್ತೆ, ಹಳಿಯಾಳ ರಸ್ತೆಯ ಗಜಾನನ ಯುವಕ ಮಂಡಳ, ಟೌನಶೀಪ್, ಸಂಡೆ ಮಾರ್ಕೆಟ್, ಹಳಿಯಾಳ ರಸ್ತೆಯ ವಿನಾಯಕನಗರ, ಕಾಗದ ಕಾರ್ಖಾನೆಯ ಶಾಪಿಂಗ್ ಕಾಂಪ್ಲೆಕ್ಸ್, ರಂಗನಾಥ ಸಭಾಭವನ, ವೈ ಟೈಪ್ ಪ್ರದೇಶ, ಎಚ್ ಟೈಪ್ ಪ್ರದೇಶ ಹೀಗೆ ಒಟ್ಟು 13 ಕಡೆಗಳ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ಹಾಗೂ ತಾಲೂಕಿನ ಅಂಬಿಕಾನಗರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಕುಳಗಿ, ಬೊಮ್ಮನಹಳ್ಳಿ, ಅಂಬಿಕಾನಗರ ಹೆಲಿಪ್ಯಾಡ್ ಇಲ್ಲಿಯ ಸಾರ್ವಜನಿಕ ಗಣೇಶ ಉತ್ಸವ ಸಮಿತಿಗಳ ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ನಡೆಯಿತು.
ಅಬ್ಬರದ ಡಿಜೆ ಸೌಂಡ್ಸ್, ಬ್ಯಾಂಡ್ ಸೆಟ್, ಅಂದ ಚೆಂದದ ಗೊಂಬೆಗಳು, ಬಾನಂಗಳದಲ್ಲಿ ತೇಲಾಡಿದ ಸುಡು ಮದ್ದಿನ ಚಿತ್ತಾರ ಇವೆಲ್ಲವು ಶ್ರೀ ಗಣೇಶನ ಭವ್ಯ ಶೋಭ ಯಾತ್ರೆಗೆ ಮೆರುಗನ್ನು ತಂದುಕೊಟ್ಟಿತು.
ಈ ಸಂದರ್ಭದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದು, ಈ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿ ಕೊಂಡರು. ನಗರದಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.