ಸಂದೇಶ್ ಎಸ್.ಜೈನ್
ದಾಂಡೇಲಿ : ಏನೇ ಇರಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಅವರನ್ನು ನೋಡಿ ಕಲಿಯಬೇಕು. ಅವರು ಬಡವರ ಮಕ್ಕಳು ಎನ್ನುವುದಕ್ಕಿಂತ ಅವರ ಗುಣವಂತಿಕೆ ಮತ್ತು ನೀತಿವಂತ ನಡವಳಿಕೆಯನ್ನು ನೋಡಿದಾಗ ನಿಜಕ್ಕೂ ಅವರು ದೇವರ ಮಕ್ಕಳು ಎಂದರೆ ಅತಿಶಯೋಕ್ತಿ ಎನಿಸದು. ಹೌದು, ಇದು ನಗರದ ಕುಳಗಿ ರಸ್ತೆಯಲ್ಲಿರುವ ವನವಾಸಿ ಕಲ್ಯಾಣ ಸಂಸ್ಥೆಯ ರುಕ್ಮಿಣಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರು ಮೈಗೂಡಿಸಿಕೊಂಡ ವ್ಯಕ್ತಿತ್ವ.
ಎಲ್ಲಿ ಧರ್ಮ ಇರುತ್ತದೆ, ಅಲ್ಲಿ ಸಂಸ್ಕಾರ ಸ್ಥಿರವಾಗಿರುತ್ತದೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯೆ ವನವಾಸಿ ಕಲ್ಯಾಣ ಸಂಸ್ಥೆಯ ಈ ರುಕ್ಮಿಣಿ ಬಾಲಿಕಾ ವಸತಿ ನಿಲಯ. ಈ ವಸತಿ ನಿಲಯದ ವಿದ್ಯಾರ್ಥಿನಿಯರು ವಸತಿ ನಿಲಯದಿಂದ ಶಾಲೆಗೆ ಸರತಿಯ ಸಾಲಲ್ಲಿ ಬರುವುದನ್ನು ನೋಡುವುದೇ ಒಂದು ಖುಷಿ. ಮಕ್ಕಳೆಂದರೆ ಹೀಗಿರಬೇಕು ಎಂಬ ಜಾಗೃತಿಯನ್ನು ಮೂಡಿಸುವ ಅವರ ರೀತಿ ಮತ್ತು ನೀತಿ ಅನುಕರಣೀಯ. ಇದಕ್ಕೆ ಕಾರಣೀಕರ್ತರಾದ ಈ ವಸತಿ ನಿಲಯದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಾರ್ಥಕ ಶ್ರಮ ಅಭಿನಂದನೀಯ.
ಈ ವಸತಿ ನಿಲಯದಲ್ಲಿ ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿಯ ವಿದ್ಯಾರ್ಥಿನಿಯರು ಹಾಡುವ ಭಜನೆಯನ್ನು ಕೇಳಿದಾಗ ಎಂತವರಲ್ಲಿಯೂ ಕೂಡ ಭಕ್ತಿ ಜಾಗೃತವಾಗಲು ಸಾಧ್ಯ.
ನಗರದ ಟೌನಶಿಪ್ ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ರುಕ್ಮಿಣಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರು ವಸತಿ ನಿಲಯದ ಮೇಲ್ವಿಚಾರಕಿಯರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಭಕ್ತಿ ಭಾವದಿಂದ ಹಾಡಿದ ಭಜನೆ ಎಲ್ಲರ ಮನಸ್ಸನ್ನು ಭಕ್ತಿ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಯಿತು.
ಈ ವಿದ್ಯಾರ್ಥಿಗಳ ಭಜನಾ ಕಾರ್ಯಕ್ರಮಕ್ಕೆ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಸ್ಥಳೀಯ ಭಕ್ತಾಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಗೌರವವನ್ನು ಸಲ್ಲಿಸಿದರು.
ನಗರದ ನಾಗರಿಕರಲ್ಲಿ ವಿನಂತಿ, ನಿಮ್ಮಲ್ಲಿ ನಡೆಯುವ ಮನೆಯ ಗೃಹಪ್ರವೇಶ, ಮದುವೆ, ಉಪನಯನ ಹೀಗೆ ಇನ್ನಿತರ ಕೌಟುಂಬಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭ ಒಂದು ಗಂಟೆಗಳವರೆಗೆ ಇದೇ ರುಕ್ಮಿಣಿ ಬಾಲಿಕಾ ವಸತಿ ನಿಲಯದ ವಿದ್ಯಾರ್ಥಿನಿಯರಿಂದ ಒಂದು ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಿ, ಅವರ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ಸಂಯೋಜಿಸಿ. ಆ ಕಾರ್ಯಕ್ರಮದ ಸಂದರ್ಭದಲ್ಲಿ ಇವರಿಂದ ಭಜನೆಯನ್ನು ಹಾಡಿಸಿ ಇವರ ಸಂಸ್ಥೆಗೆ ನಮ್ಮಿಂದ ಸಾಧ್ಯವಾಗುವಷ್ಟು ಗೌರವಯುತ ರೀತಿಯಲ್ಲಿ ಧನಸಹಾಯ ಮಾಡಿದ್ದಲ್ಲಿ ಪುಣ್ಯವೂ ಪ್ರಾಪ್ತಿಯಾಗುತ್ತದೆ.