ಶಿರಸಿ: ಇಲ್ಲಿಯ ಪ್ರತಿಷ್ಟಿತ ಟಿ.ಎಸ್.ಎಸ್. ಸಂಸ್ಥೆಯಲ್ಲಿ ವ್ಯಕ್ತಿಯೋರ್ವರ ಆರೋಗ್ಯಕ್ಕೆ ಸಂಬಂಧಿಸಿ, ಸರ್ಜಿಕಲ್ ವಸ್ತುವೊಂದರ ಅವಧಿ ಮುಗಿದಿದ್ದರೂ ಸಹ, ಹೊಸ ಬಾಕ್ಸಿನಲ್ಲಿ ಅವಧಿ ಮುಗಿದ ಸರ್ಜಿಕಲ್ ವಸ್ತುವನ್ನು ತುಂಬಿ ಕೊಡುತ್ತಿದ್ದಾರೆ ಎಂಬ ಆರೋಪದ ಮೇಲೆ ಗ್ರಾಹಕರು ಸಿಬ್ಬಂದಿ ವರ್ಗದವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ವಾನಳ್ಳಿ ಸಮೀಪದ ಪ್ರಸಾದ ಎಂಬಾತರು ತಮ್ಮ ತಂದೆಯ ಅನಾರೋಗ್ಯದ ಕಾರಣಕ್ಕೆ ಕಾಲಿಗೆ ಹಾಕುವ ಸರ್ಜಿಕಲ್ ಸಾಧನವನ್ನು ಕೆಲವು ದಿನದ ಹಿಂದೆ ಟಿಎಸ್ಎಸ್ ನಲ್ಲಿ ಖರೀದಿ ಮಾಡಿದ್ದರು. ಆದರೆ ಮನೆಗೆ ತೆಗೆದುಕೊಂಡು ಹೋದ ಬಳಿಕ ನೋಡಿದಾಗ, ಒಂದು ವರ್ಷಕ್ಕೂ ಅಧಿಕ ಸಮಯದ ಹಿಂದೆಯೇ ಅವಧಿ ಮುಗಿದ ದಿನಾಂಕ ಇದ್ದಿದ್ದು, ಎಕ್ಸ್ಪೈರಿ ಡೇಟ್ ಅವಧಿ ಮೀರಿದ್ದರಿಂದ ಟಿಎಸ್ಎಸ್ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಈ ವೇಳೆ ಇನ್ನೂ ಅನೇಕ ವಸ್ತುಗಳು ಎಕ್ಷ್ಪೈರಿ ಆಗಿದ್ದರ ಕುರಿತು ಪರಿಶೀಲಿಸುವ ವೇಳೆಗೆ, ಹೊಸದಾಗಿ ತರಿಸಿರುವ ಕೇವಲ ಖಾಲಿ ಬಾಕ್ಸ್ ಗಳು ಮಾತ್ರ ಕಂಡು ಬಂದಿದೆ. ಇದನ್ನು ನೋಡಿದ ಗ್ರಾಹಕರು ಅಸಮಾಧಾನಗೊಂಡು ಎಕ್ಸ್ಪೈರಿ ಆಗಿರುವ ವಸ್ತುವನ್ನು ಹೊಸ ಬಾಕ್ಸಿನಲ್ಲಿ ಹಾಕಿ, ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುವ ಉದ್ಧೇಶ ಹೊಂದಿದ್ದಾರೆ. ಇನ್ನೂ ಸಾಕಷ್ಟು ವಸ್ತುಗಳು ಸರ್ಜಿಕಲ್ ಹಾಗು ಮೆಡಿಕಲ್ ವಿಭಾಗದಲ್ಲಿ ಇದ್ದು, ಈ ನಿಟ್ಟಿನಲ್ಲಿ ಕೂಡಲೇ ತನಿಖೆ ನಡೆಯಬೇಕು ಮತ್ತು ಸಂಬಂಧಪಟ್ಟ ಇಲಾಖೆ ತುರ್ತು ತನಿಖೆ ಕೈಗೊಂಡು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.