ಅಕ್ಷಯ ಶೆಟ್ಟಿ ರಾಮನಗುಳಿ
ಯಲ್ಲಾಪುರ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದು ತಾಲೂಕಿನೆಲ್ಲೆಡೆ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಮೂರ್ತಿ ಕಲಾವಿದರು ಗಣೇಶನ ವಿಗ್ರಹಕ್ಕೆ ಬಣ್ಣ ನೀಡುವ ಮೂಲಕ ಅಂತಿಮ ಸ್ಪರ್ಶ ನೀಡಲು ಸಜ್ಜಾಗುತ್ತಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ. ತಾಲೂಕಿನ ಗುಳ್ಳಾಪುರದ ಖ್ಯಾತ ಮೂರ್ತಿ ಕಲಾವಿದ ಸುದರ್ಶನ ಆಚಾರಿ ಅವರು ಪ್ರತಿವರ್ಷದಂತೆ ಈ ವರ್ಷವೂ ಕೂಡ ಭಿನ್ನ ವಿಭಿನ್ನ ಗಣೇಶ ಮೂರ್ತಿಗಳನ್ನು ತಯಾರಿಸಿದ್ದು ಇದೀಗ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಮಾಡುತ್ತಿದ್ದಾರೆ. ಸುಮಾರು 40 ವರ್ಷಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಇವರು ತಾಲೂಕಿನಲ್ಲಿಯೇ ಅತಿ ಕಡಿಮೆ ಬೆಲೆಯಲ್ಲಿ ಮೂರ್ತಿಗಳನ್ನು ನಿರ್ಮಿಸಿ ಕೊಡುವ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ದೂರದ ಪಟ್ಟಣಕ್ಕೆ ತೆರಳಿ ಮೂರ್ತಿ ತರುವುದಕ್ಕಿಂತ ಬಹುತೇಕ ಸುದರ್ಶನ ಆಚಾರಿ ಅವರ ಬಳಿ ಖರೀದಿಸುವುದೇ ಹೆಚ್ಚು.
ತನ್ನ ತಂದೆಯವರು ಮೂರ್ತಿ, ಚಿತ್ರ ಕಲೆಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು. ಅವರೇ ನಮಗೆ ಸ್ಫೂರ್ತಿ ಎಂದು ಹೇಳುತ್ತಾರೆ ಸುದರ್ಶನ ಆಚಾರಿ. ತಮ್ಮ 70 ನೇ ವಯಸ್ಸಲ್ಲಿಯೂ ಶ್ರದ್ಧಾ-ಭಕ್ತಿಯಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವುದು ವಿಶೇಷ. ಪ್ರತಿವರ್ಷ ಸುಮಾರು 50 ಕ್ಕೂ ಹೆಚ್ಚು ಮೂರ್ತಿಗಳನ್ನು ಇವರು ನಿರ್ಮಿಸುತ್ತಾರೆ.
ಗಣೇಶ ಚತುರ್ಥಿಯ 2-3 ತಿಂಗಳು ಪೂರ್ವದಿಂದ ಗಣಪನ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತೇವೆ. ಇದೀಗ ಮೂರ್ತಿಗಳಿಗೆ ಬಣ್ಣ ನೀಡುವ ಕೆಲಸ ಭರದಿಂದ ನಡೆಯುತ್ತಿದೆ. ನನ್ನ ಕಲೆಗೆ ನಮ್ಮ ತಂದೆಯವರೇ ಸ್ಪೂರ್ತಿ, ಮಾರ್ಗದರ್ಶಕರು.
–ಸುದರ್ಶನ ಆಚಾರಿ
(ಮೂರ್ತಿ ಕಲಾವಿದರು ಗುಳ್ಳಾಪುರ)