Slide
Slide
Slide
previous arrow
next arrow

ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಸುರೇಶ ನಾಯಕ ಅರ್ಹ: ತಪ್ಪಿದ ಅವಕಾಶಕ್ಕೆ ದಾಂಡೇಲಿಗರ ಬೇಸರ

300x250 AD

‘ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡು, ‘ಕರ್ತವ್ಯ ಬದ್ಧತೆ’ ಪ್ರಶಸ್ತಿ‌ ನೀಡಲು ಮಾನದಂಡವಾಗಲಿ’

– ಸಂದೇಶ್ ಎಸ್.ಜೈನ್

ದಾಂಡೇಲಿ: ಅವರು ಶಿಕ್ಷಕನೆಂಬ ಅಹಂ ಇಲ್ಲದ ಸರಳತೆಯನ್ನೆ ಮೈಗೂಡಿಸಿಕೊಂಡಿರುವ ಸುಸಂಸ್ಕೃತ ವ್ಯಕ್ತಿ. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿರುವ ದಾಂಡೇಲಿಯ ಹೆಮ್ಮೆಯ ಮಾಸ್ತರ ಸುರೇಶ ನಾಯಕ.

ಬರುವ ಮೇ ತಿಂಗಳಲ್ಲಿ ವೃತ್ತಿ ಬದುಕಿಗೆ ನಿವೃತ್ತರಾಗಲಿರುವ ಸುರೇಶ ನಾಯಕ ಅವರಿಗೆ ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬರಬಹುದೆಂಬ ಬಲವಾದ ನಂಬಿಕೆಯಲ್ಲಿ ದಾಂಡೇಲಿಗರು ಇದ್ದದ್ದು ಹೌದು.

ಒಬ್ಬ ದಕ್ಷ ಶಿಕ್ಷಕರಾಗಿ, ಮಕ್ಕಳ ಮೆಚ್ಚಿನ ಗುರುಗಳಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಸುರೇಶ ನಾಯಕ  ಅವರು ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿಯೂ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದವರು.

ಅದೇಷ್ಟೋ ಮಕ್ಕಳ ಕ್ರೀಡಾ ಬದುಕಿಗೆ ಭದ್ರ ಭವಿಷ್ಯವನ್ನು ಕಟ್ಟಿಕೊಟ್ಟ ನಲ್ಮೆಯ ಸುರೇಶ್ ನಾಯಕ ಅವರಿಗೆ ಈ ಬಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಬೇಕಿತ್ತು ಎಂಬ ಮನದ ಭಾವ ದಾಂಡೇಲಿಗರಲ್ಲಿ ಇತ್ತು. ಇನ್ನೂ ಬಹಳಷ್ಟು ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶ ಇದ್ದಂತಹ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುವಂತಹ ಸಂದರ್ಭದಲ್ಲಿ, ಇನ್ನೂ ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿರುವ ಸುರೇಶ್ ನಾಯಕರಂತಹ ಶಿಕ್ಷಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಬೇಕಿತ್ತು.

300x250 AD

ಸುದೀರ್ಘ ವರ್ಷಗಳ ಸೇವೆ, ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಸಲ್ಲಿಸಿದ ಸೇವೆ, ಶೈಕ್ಷಣಿಕ ಕ್ಷೇತ್ರದ ಪ್ರಗತಿಗಾಗಿ ನೀಡಿದ ಸೇವೆ, ಶಾಲೆ ಮತ್ತು ಶಾಲಾಭಿವೃದ್ಧಿ ಸಮಿತಿಯ ಜೊತೆಗೆ ಸ್ಥಳೀಯ ಗ್ರಾಮಸ್ಥರ ಜೊತೆ ಬಾಂಧವ್ಯದ ಸೇತುವೆಯಾಗಿ ಕೆಲಸ ಮಾಡಿರುವುದನ್ನು ಗುರುತಿಸಿ ಸುರೇಶ ನಾಯಕ ಅವರಿಗೆ ಅವರ ಇಷ್ಟು ವರ್ಷಗಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ, ಈ ಬಾರಿ ಅವರನ್ನು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲೇಬೇಕು ಎಂಬ ವಿನಮ್ರ ಆಗ್ರಹ ನಗರದ ಜನತೆಯದ್ದಾಗಿದೆ.

ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲೂ ಯಾವುದೇ ಕ್ರೀಡಾ ಕಾರ್ಯಕ್ರಮಗಳಿರಲಿ, ಪ್ರತಿಭಾ ಕಾರಂಜಿಗಳಿರಲಿ, ಶಿಕ್ಷಣ ಇಲಾಖೆಯ ಯಾವುದೇ ಕಾರ್ಯಕ್ರಮಗಳಿದ್ದರೂ ಆ ಕಾರ್ಯಕ್ರಮಗಳ ಯಶಸ್ಸಿನಲ್ಲಿ ಸುರೇಶ ನಾಯಕರ ಶ್ರಮ ಖಂಡಿತ ಇದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಹಲವಾರು ಸಂದರ್ಭದಲ್ಲಿ ಸಮಸ್ಯೆಗಳು ಬಂದಾಗ ಸಮಸ್ಯೆಗಳನ್ನು ಪರಿಹರಿಸುವ ಗಟ್ಟಿ ಧ್ವನಿಯಾಗಿ ನಿಂತವರು ಕೂಡ ಇದೆ ಸುರೇಶ ನಾಯಕ ಅವರು ಎನ್ನುವ ಅಭಿಮಾನ ನಗರದ ಜನತೆಗಿದೆ.

ಈ ಬಾರಿ ಶಿರಸಿ ಶೈಕ್ಷಣಿಕ‌ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಾಂಡೇಲಿಯಿಂದ ಯಾವೊಬ್ಬ ಶಿಕ್ಷಕರನ್ನೂ ಆಯ್ಕೆ ಮಾಡದೇ ಇರುವುದು ಕೂಡ ದಾಂಡೇಲಿಗರ ಮನಸ್ಸಿಗೆ ನೋವು ತಂದಿದೆ.

ಹೌದು ಈ ಪ್ರಶಸ್ತಿ ಅರ್ಜಿ ಹಾಕಿದವರಿಗೆ ಮಾತ್ರ ಅಂದ ಮೇಲೆ ಇನ್ನೇನು ಹೇಳಲಾಗುವುದಿಲ್ಲ. ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಕೊನೆಗಾಣಿಸಿ, ಶಿಕ್ಷಕರ ಕರ್ತವ್ಯ ಬದ್ಧತೆ, ಕಲಿಕೆಯ ಗುಣಮಟ್ಟ, ಶಾಲೆಯ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ, ನೀತಿ ಇವೆಲ್ಲವುಗಳನ್ನು ಮಾನದಂಡವಾಗಿಸಿಕೊಂಡು ಪ್ರಶಸ್ತಿಯನ್ನು ನೀಡಬೇಕೆ ಹೊರತು, ಕೇವಲ ಅರ್ಜಿ ಸಲ್ಲಿಸಿದವರನ್ನಷ್ಟೇ ಈ ಪ್ರಶಸ್ತಿಗೆ ಪರಿಗಣಿಸಿದರೇ ಈ ಪ್ರಶಸ್ತಿಯಿಂದ ಬಹುತೇಕ ಅರ್ಹರು ಅನುಭವಸ್ಥರು ಮತ್ತು ಪ್ರಾಮಾಣಿಕರು ವಂಚಿತರಾಗುವುದಂತೂ ಸತ್ಯ.

ಏನೇ ಇರಲಿ, ಸುರೇಶ ನಾಯಕರನ್ನು ಈ ಪ್ರಶಸ್ತಿಯಿಂದ ವಂಚಿತರನ್ನಾಗಿಸಬಹುದು ಆದರೆ ದಾಂಡೇಲಿಯ ಮನೆ ಮನಗಳಲ್ಲಿ ಸುರೇಶ ನಾಯಕ ಅವರ ಮೇಲೆ ಗೌರವ ಮತ್ತು ಅಭಿಮಾನ ಸದಾ ಇರುತ್ತದೆ ಎನ್ನುವುದು ಅಷ್ಟೇ ಸತ್ಯ. ಪ್ರಶಸ್ತಿಗಾಗಿ ಅರ್ಜಿ ಹಾಕದೆ, ತನಗೆ ವಹಿಸಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸುತ್ತಿರುವ ಸುರೇಶ ನಾಯಕ ಅವರಿಗೆ ಅವರ ಹೃದಯ ಶ್ರೀಮಂತಿಕೆಯೆ ಬಹುದೊಡ್ಡ ಪ್ರಶಸ್ತಿ ಎನ್ನುವುದನ್ನು ದಾಂಡೇಲಿಯ ಜನ ಯಾವತ್ತು ಒಪ್ಪಿಕೊಳ್ಳುತ್ತಾರೆ.

Share This
300x250 AD
300x250 AD
300x250 AD
Back to top