ಸಿದ್ದಾಪುರ: ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುವ ಆ ಮೂಲಕ ಅತ್ಯುತ್ತಮ ರಾಷ್ಟ್ರ ಕಟ್ಟುವ ಶಕ್ತಿ ಸಾಹಿತ್ಯಕ್ಕಿದೆ. ಅಂಥ ಮೌಲ್ಯವುಳ್ಳ ಸಾಹಿತ್ಯದ ರಚನೆ ಮತ್ತು ಸಾಹಿತ್ಯದ ಸಂಘಟನೆಗೆ ತೊಡಗಿಕೊಂಡಿರುವದು ನೂರು ವರ್ಷಗಳ ಹೊಸ್ತಿಲಲ್ಲಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷದ್. ಈ ಸಂಘಟನೆ ಎಲ್ಲೆಡೆಯೂ ಗಟ್ಟಿಯಾಗಿ ಬೆಳೆಯಬೇಕು. ಸದಾ ನನ್ನ ಸಹಕಾರ ಇದ್ದೇ ಇರುತ್ತದೆ ಎಂದು ಜಿ.ಎಸ್.ಬಿ.ಸಮಾಜದ ಅಧ್ಯಕ್ಷ, ಪ್ರಮುಖ ಉದ್ಯಮಿ ಜಯವಂತ ಪದ್ಮನಾಭ ಶಾನಭಾಗ ಹೇಳಿದರು.
ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಶಿರಸಿ ಜಿಲ್ಲೆಯ ಸಿದ್ದಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಶ್ರೀರಾಮ ಭಜನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ವಿಶೇಷ ಆಮಂತ್ರಿತರಾದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿ ಸಾಹಿತ್ಯ ವರ್ತಮಾನದ ಸಂದರ್ಭಗಳಿಗೆ ಸ್ಪಂದಿಸಿದಾಗ ನಿಜವಾದ ಸಾಹಿತ್ಯವಾಗುತ್ತದೆ. ಸಂವೇದನಾಶೀಲತೆ ಸಿದ್ಧಾಂತಕ್ಕೆ ಬದ್ಧವಾಗಿರಬಾರದು. ಸಾಹಿತಿ ಓರ್ವ ಕಾರ್ಯಕರ್ತನಾಗಿಯೂ ಕೆಲಸ ಮಾಡಿದಾಗ ಸಮಾಜಕ್ಕೆ, ರಾಷ್ಟ್ರಕ್ಕೆ ಉತ್ತಮ ಕೊಡುಗೆ ಸಾಧ್ಯ. ಸಾಹಿತ್ಯ ಕಾಲಕ್ಕೆ ಸ್ಪಂದಿಸಬೇಕಾದ ಅಗತ್ಯವಿದೆ. ಸಹೃದಯರಿಂದ ಸಾಹಿತ್ಯ ಕ್ಷೇತ್ರ ಬೆಳೆಯುತ್ತದೆ. ಮಾನವೀಯ ಮತ್ತು ಹಾರ್ದಿಕ ಸಂಬಂಧವನ್ನು ಬೆಳೆಸುವ, ಬೆಸೆಯುವ ಕಾರ್ಯ ಸಾಹಿತ್ಯ ಸಂಘಟನೆಯಿಂದ ಸಾಧ್ಯ. ಆ ಕಾರ್ಯವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಾಡುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನರೂರು ಮಾತನಾಡಿ ವಿಶ್ವದ ಬಹುಭಾಗಗಳಲ್ಲಿ ನಾಗರಿಕತೆ ಬೆಳೆದಿರದ ಸಂದರ್ಭದಲ್ಲಿ ಭಾರತದಲ್ಲಿ ರಾಮಾಯಣ,ಮಹಾಭಾರತಗಳಂಥ ಅವಿನಾಶಿ ಸಾಹಿತ್ಯ ರಚಿಸಲ್ಪಟ್ಟವು. ಸಾವಿರಾರು ವರ್ಷ ವಿದೇಶಿಗರ ಆಕ್ರಮಣ ನಡೆದರೂ ಭಾರತವನ್ನು ಭದ್ರವಾಗಿಸಿದ್ದು ಇಂಥ ಸಾಹಿತ್ಯ. ಸಮಾಜ, ವ್ಯಕ್ತಿ ದಿಕ್ಕುತಪ್ಪಿದಾಗ ನಿಜವಾದ ದಾರಿ ತೋರಿಸುವದು ಶುದ್ಧ ಸಾಹಿತ್ಯ. ಉತ್ತಮ ಸಾಹಿತ್ಯದ ಮೂಲಕ ಸಮಾಜ ಮತ್ತು ದೇಶವನ್ನು ಸಧೃಢಗೊಳಿಸುವದು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಉದ್ದೇಶ ಎಂದರು.
ಇನ್ನೊರ್ವ ವಿಶೇಷ ಆಮಂತ್ರಿತ ಅಭಾಸಾಪದ ರಾಜ್ಯ ಸಮಿತಿ ಆಮಂತ್ರಿತ ಸದಸ್ಯ ಜಗದೀಶ ಭಂಡಾರಿ ಮಾತನಾಡಿ ಸಮಾಜ ಮತ್ತು ದೇಶವನ್ನು ಕಟ್ಟುವ ಸಾಹಿತ್ಯ ಇಂದಿನ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಾಸಾಪದ ಶಿರಸಿ ಜಿಲ್ಲೆ ಅಧ್ಯಕ್ಷ ಗಂಗಾಧರ ಕೊಳಗಿ ಸಾಹಿತಿಯ ಜವಾಬ್ದಾರಿ ಕೇವಲ ಬರವಣಿಗೆಗೆ ಸೀಮಿತವಲ್ಲ. ಠೊಳ್ಳು ಸಿದ್ಧಾಂತಗಳಿಗಿಂತ ಸಮಾಜದ, ದೇಶದ ಉನ್ನತಿ ಸಾಹಿತ್ಯಕ್ಕೆ ಮುಖ್ಯವಾಗಬೇಕು ಎಂದರು.
ಅಭಾಸಾಪದ ಶಿರಸಿ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಪ್ರಕಾಶ ಭಾಗ್ವತ ಸ್ವಾಗತಿಸಿದರು. ತಾಲೂಕು ಸಮಿತಿ ಸಹಕಾರ್ಯದರ್ಶಿ ವೀಣಾ ಆನಂದ ಶೇಟ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಧೀರ ಬೇಂಗ್ರೆ ಪ್ರಾರ್ಥಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಮಿತಿಯ ಆರ್.ಎನ್.ಹಳಕಾರ(ಅಧ್ಯಕ್ಷ), ಸುಧೀರ ಬೆಂಗ್ರೆ(ಪ್ರಧಾನ ಕಾರ್ಯದರ್ಶಿ), ವೀಣಾ ಆನಂದ ಶೇಟ್(ಸಹಕಾರ್ಯದರ್ಶಿ), ನಿತಿನ್‌ಕುಮಾರ ಭಟ್ಟಿ( ಖಜಾಂಚಿ), ಕುಮಾರ ಪೋಕಳೆ( ಸಂಘಟನಾ ಕಾರ್ಯದರ್ಶಿ),ಜ್ಯೋತಿ ವಿ.ಹೆಗಡೆ(ಮಹಿಳಾ ಪ್ರಮುಖ್),ದಿವಾಕರ ನಾಯ್ಕ(ಸಂಘಟನಾ ಪ್ರಮುಖ),ಸಂತೋಷ ಹುಲೇಕಲ್(ಮಾಧ್ಯಮ ಪ್ರಮುಖ), ಸದಸ್ಯರುಗಳಾದ ಐ.ಕೆ.ನಾಯ್ಕ ನಾಗರಕಟ್ಟೆ, ಮಂಜುನಾಥ ನಾಯ್ಕ ಯೋಗಶಿಕ್ಷಕ ಇವರುಗಳಿಗೆ ನಾರಾಯಣ ಶೇವಿರೆ ಪ್ರತಿಜ್ಞಾವಿಧಿ ಬೋಧಿಸಿದರು.