Slide
Slide
Slide
previous arrow
next arrow

ಡಾ.ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರಧಾನ : ದೀಪಾಲಿ ಸಾಮಂತರ ಕೃತಿಗಳ ಅನಾವರಣ

300x250 AD

ದಾಂಡೇಲಿ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ಘಟಕದ ಅಧ್ಯಕ್ಷರು ಹಾಗೂ ಸಾಹಿತಿ ದೀಪಾಲಿ ಸಾಮಂತರ ‘ಮಧು ಭಾವ ಶರಧಿ’ ಮತ್ತು ‘ನಕ್ಕರದುವೇ ನಾಕವು’ ಕೃತಿಗಳ ಲೋಕಾರ್ಪಣೆ ಜೊತೆಗೆ ಐವರು ಸಾಧಕರಿಗೆ ರಾಜ್ಯ ಮಟ್ಟದ ಡಾ. ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಕವಿ ಗೋಷ್ಠಿಯು ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಭಾನುವಾರ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ‘ಮಧು ಭಾವ ಶರಧಿ’ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದ ಕೇಂ.ಕ.ಸಾ.ವೇ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಅವರು ನಾಡು, ನುಡಿಯ ನಿಸ್ವಾರ್ಥ ಸೇವೆಗಾಗಿ ಜನ್ಮ ತಾಳಿದ ಸಂಸ್ಥೆಯೆ ಕೇಂ.ಕ.ಸಾ.ವೇದಿಕೆ. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಕನ್ನಡದ ಕಂಪು ಸಾರುವ ಮೂಲಕ ಕನ್ನಡದ ಮನಸುಗಳನ್ನು ಒಂದುಗೂಡಿಸುವ ಕಾರ್ಯಕ್ಕೆ ಮುಂದಡಿಯಿಡಲಾಗಿತ್ತು. ನಮ್ಮ ವೇದಿಕೆಯ ವತಿಯಿಂದ ಪ್ರತಿ ವರ್ಷವೂ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ಕೊಡುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಅರ್ಜಿಯನ್ನು ಬಯಸದೆ ನಿಜವಾದ ಸಾಧಕರನ್ನು ಸನ್ಮಾನಿಸುವ ಕಾರ್ಯವನ್ನು ನಮ್ಮ ಸಂಸ್ಥೆಯು ಮಾಡುತ್ತಾ ಬಂದಿದೆ. ನಾಡು, ನುಡಿ ಸೇವೆಯು ನಿರಂತರವಾಗಿ ರಾಜ್ಯ ವ್ಯಾಪಿ ನಮ್ಮ ಸಂಘಟನೆಯ ಮೂಲಕ ಮಾಡಿಕೊಂಡು ಬರಲಾಗುತ್ತಿದೆ. ಜಿಲ್ಲೆಯ ನಮ್ಮ ಸಂಸ್ಥೆಯ ಘಟಕಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಹಿತಿ ದೀಪಾಲಿ ಸಾಮಂತವರು ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ ಪರಿಣಾಮವಾಗಿ ಇವತ್ತು ಅವರ ಎರಡು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಬಂದಿರುವುದು ಮಹತ್ವದ ಕೊಡುಗೆಯಾಗಿದೆ ಎಂದರು.

ದೀಪಾಲಿ ಸಾಮಂತ ಅವರ ಇನ್ನೊಂದು ಕೃತಿಯಾದ ‘ನಕ್ಕರದುವೇ ನಾಕವು’ ಕೃತಿಯನ್ನು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂದೇಶ್ ಎಸ್.ಜೈನ್ ಅವರು ಅನಾವರಣಗೊಳಿಸಿ ಮಾತನಾಡುತ್ತಾ, ಮನುಷ್ಯನಿಂದ ಹಿಡಿದು ಪ್ರತಿಯೊಂದು ಜೀವಿಗೂ ಸಾವಿದೆ. ಕಟ್ಟಿದ ಕಟ್ಟಡ ಬೀಳಬಹುದು, ದೇಣಿಗೆಯಾಗಿ ಕೊಟ್ಟ ವಸ್ತುಗಳು ಹಾಳಾಗಬಹುದು. ಆದರೆ ಬರೆದ ಅಕ್ಷರಗಳು ಸದಾ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಾವು ಸಾಹಿತ್ಯ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ಮನೆಯಲ್ಲಿ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಸಂಸ್ಕಾರಯುತವಾದ ವಾತಾವರಣ ನಿರ್ಮಾಣವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಯಾವುದೇ ಅಭಿಲಾಷೆ ಇಲ್ಲದೆ ಕನ್ನಡಕ್ಕಾಗಿ, ಕನ್ನಡದ ಮನಸುಗಳಿಗಾಗಿ, ಕನ್ನಡದ ನೆಲಕ್ಕಾಗಿ, ಕನ್ನಡದ ಭಾಷೆಗಾಗಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಅವಿಶ್ರಾಂತವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ದೀಪಾಲಿ ಸಾಮಂತರವರು ನಗರದ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಅವರಿಂದ ಪ್ರೇರಣೆಯಾಗಿ ಅನೇಕರು ಇಂದು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊ‌ಡಿರುವುದು ಉತ್ತಮವಾದ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಶಿವಲೀಲಾ ಹುಣಸಗಿ ಅವರು ಕೊಟ್ರೇಶ್ ಉಪ್ಪಾರ್ ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯನ್ನು ಹುಟ್ಟು ಹಾಕಿ, ನಮ್ಮಂತ ಸಾವಿರಾರು ಜನರಿಗೆ ಕನ್ನಡದ ಕೆಲಸ ಮಾಡಲು ಒಂದು ವೇದಿಕೆ ನಿರ್ಮಾಣ ಮಾಡಿರುವುದು ನಿಜಕ್ಕೂ ಅತ್ಯುತ್ತಮವಾದ ಕಾರ್ಯ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ನಮ್ಮ ಘಟಕಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಘಟಕಗಳು ಒಂದು ಕುಟುಂಬದ ಸದಸ್ಯರಂತೆ ಇದ್ದು, ಕನ್ನಡ ನಾಡು, ನುಡಿಯ ಕಾರ್ಯವನ್ನು ಅತ್ಯಂತ ಶಿಸ್ತು ಬದ್ಧವಾಗಿ ಸಂಘಟಿಸುತ್ತಾ ಬರುತ್ತಿರುವುದು ನಮಗೆಲ್ಲ ಅತೀವ ಹೆಮ್ಮೆ ತಂದಿದೆ ಎಂದರು. ದೀಪಾಲಿ ಸಾಮಂತ ಅವರ ಕ್ರಿಯಾಶೀಲತೆ ಬದ್ಧತೆ ಹಾಗೂ ಸಾಹಿತ್ಯ ಚಟುವಟಿಕೆ ಅನುಕರಣೀಯ ಮತ್ತು ಅಭಿನಂದನೀಯ ಎಂದರು.

ಹಳೆ ದಾಂಡೇಲಿಯ ಉರ್ದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಾಹಿತಿಗಳಾದ ಅಬ್ದುಲ್ ರೆಹಮಾನ್ ಮಾತನಾಡಿ ದೀಪಾಲಿ ಸಾಮಂತ ಅವರ ಕೃತಿಗಳಲ್ಲಿ ಸಾಮಾಜಿಕವಾದ ಮೌಲ್ಯಗಳಿವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಮನೆ ಮನೆಗಳಲ್ಲಿ ಕನ್ನಡವನ್ನು ಸದೃಢಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಐವರು ಸಾಧಕರುಗಳಾದ ನಗರದ ಸಾಹಿತ್ಯ ಪ್ರತಿಭೆ ಕುಶಾಲ್ ಶರದ್ ಕುಲಕರ್ಣಿ, ಮೈಸೂರು ಜಿಲ್ಲೆಯ ಮಹಮುದ್ ಅಂಜುಮ್ ಪಾಷಾ, ಕೊಡಗು ಜಿಲ್ಲೆಯ ರಶ್ಮಿ ಚಂಗಚಂಡ, ವಿಜಯಪುರ ಜಿಲ್ಲೆಯ ಗುರುಲಿಂಗಪ್ಪ ಮಲ್ಲಪ್ಪ ಹಳ್ಳೂರ ಇವರಿಗೆ ರಾಜ್ಯಮಟ್ಟದ ಡಾ.ದಿನಕರ ದೇಸಾಯಿ ಸಾಹಿತ್ಯ ಪುರಸ್ಕಾರವನ್ನು ಪ್ರಧಾನ ಮಾಡಲಾಯಿತು.

300x250 AD

ಸನ್ಮಾನಿತರ ಪರವಾಗಿ ಮಹಮುದ್ ಅಂಜುಮ್ ಪಾಷಾ ಅವರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ‘ಮಧು ಭಾವ ಶರಧಿ’ ಕೃತಿಯನ್ನು ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯರಾದ ಎನ್.ಆರ್.ನಾಯ್ಕ ಹಾಗೂ ‘ನಕ್ಕರು ಅದುವೇ ನಾಕವು’ ಕೃತಿಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಧಾರವಾಡ ಜಿಲ್ಲಾಧ್ಯಕ್ಷರಾದ ಎ.ಎ.ದರ್ಗಾ ಪರಿಚಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷೆ ಹಾಗೂ ಕೃತಿಕಾರರಾದ ದೀಪಾಲಿ ಸಾಮಂತ ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತುಂಬು ಹೃದಯದ ಸಹಕಾರ, ಪ್ರೋತ್ಸಾಹ, ಮಾರ್ಗದರ್ಶನದಿಂದಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಸಣ್ಣಮಟ್ಟಿನ ಸೇವೆ ಸಲ್ಲಿಸಲು ಸಹಕಾರಿಯಾಯಿತು. ನಮ್ಮ ಘಟಕದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ಸಂಪೂರ್ಣ ಬೆಂಬಲ ವಿಶೇಷವಾಗಿ ಕುಟುಂಬಸ್ಥರ ಸದಾ ಸಹಕಾರ ಮತ್ತು ಪ್ರೋತ್ಸಾಹ ಸಾಹಿತ್ಯ ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು ಎಂದರು.

ವಿಶೇಷ ಅಹ್ವಾನಿತರಾಗಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಆರ್.ಪಿ.ನಾಯ್ಕ, ಶ್ರೀಗಂಧ ಟ್ರಸ್ಟಿನ ಅಧ್ಯಕ್ಷರಾದ ರಾಜೇಶ್ ತಳೇಕರ, ಏಕಲ್ ವಿದ್ಯಾಲಯದ ನಗರದ ಅಧ್ಯಕ್ಷರಾದ ಪ್ರಕಾಶ್ ಬೇಡ್ಕರ್, ಗಾಯಕ ಯಲ್ಲಾಪುರದ ಶ್ರೀಪಾದ್ ಭಟ್, ಹಿರಿಯರಾದ ಬಾಬಣ್ಣ ಶ್ರೀವತ್ಸ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ಭಾರತಿ ನಲವಡೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜೋಯಿಡಾ ತಾಲೂಕು ಅಧ್ಯಕ್ಷೆ ಸುಮಂಗಲಾ ದೇಸಾಯಿ, ಮುಂಡಗೋಡ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಬಾಲಚಂದ್ರ ಹೆಗಡೆ, ಯಲ್ಲಾಪುರದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶೆಟ್ಟಿ ಆಶಾ ಅವರು ಭಾಗವಹಿಸಿದ್ದರು.

ಶೋಭಾ ಕೋಲಕರ್ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮಕ್ಕೆ ಶಿಕ್ಷಕ ಗಿರೀಶ ಶಿರೋಡ್ಕರ್ ವಂದಿಸಿದರು.

ಸಭಾ ಕಾರ್ಯಕ್ರಮ ಮುಗಿದ ಬಳಿಕ ಕಾವ್ಯ ನೀನಾದ ಜಿಲ್ಲಾಮಟ್ಟದ ಕವಿಗೋಷ್ಠಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಯಶಸ್ವಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ದೀಪಕ್ ಸಾಮಂತ ಸೇರಿದಂತೆ ದೀಪಾಲಿ ಸಾಮಂತ ಅವರ ಕುಟುಂಬಸ್ಥರು ಶ್ರಮಿಸಿದ್ದರು.

Share This
300x250 AD
300x250 AD
300x250 AD
Back to top