ಸಿದ್ದಾಪುರ: ದಾಂಡೇಲಿಯಲ್ಲಿ ಕರ್ತವ್ಯ ನಿರತ ಪತ್ರಕರ್ತರ ಮೇಲೆ ದರ್ಪ,ಅನುಚಿತ ವರ್ತನೆ ನಡೆಸಿದ ಪೊಲೀಸ್ ಅಧಿಕಾರಿಯ ಮೇಲೆ ಸೂಕ್ತ ಕ್ರಮವಹಿಸುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ ಅವರ ಮೂಲಕ ಶುಕ್ರವಾರ ಮನವಿ ಸಲ್ಲಿಸಲಾಯಿತು.
ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರ ಕುರಿತು ಅಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಹಿರಿಯ ಪತ್ರಕರ್ತರೂ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ಹಾಗೂ ಮತ್ತಿತರ ಪತ್ರಕರ್ತರ ಮೇಲೆ ಅಲ್ಲಿಯ ಸಿಪಿಐ ಭೀಮಣ್ಣ ಸೂರಿಯವರು ನಡೆಸಿದ ದರ್ಪ, ಅನುಚಿತ ನಡವಳಿಕೆಯನ್ನು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪತ್ರಕರ್ತರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಜವಾಬ್ದಾರಿ ಹೊತ್ತಿರುವ ಪೊಲೀಸ್ ಅಧಿಕಾರಿ ಸಿಪಿಐ ಭೀಮಣ್ಣ ಸೂರಿ ತಮ್ಮ ಅನುಚಿತ ವರ್ತನೆಯಿಂದ ತಮ್ಮ ಇಲಾಖೆಯ ಗೌರವವನ್ನು ಕಳೆದಿರುವದು ದುರದೃಷ್ಟದ ಸಂಗತಿ. ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಾಂಶುಪಾಲರ ಪರವಾಗಿ ಬೆಂಬಲಿಸಿದ್ದನ್ನು, ಸ್ಥಳದಲ್ಲಿದ್ದ ಮಾಧ್ಯಮದವರ ಜತೆ ಅನುಚಿತವಾಗಿ ನಡೆದುಕೊಂಡಿರುವದನ್ನು ಹಲವು ಮಾಧ್ಯಮದ ಮೂಲಕ ಎಲ್ಲರೂ ಗಮನಿಸಿದ್ದಾರೆ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ಕುರಿತು ಸಮರ್ಪಕ ವಿಚಾರಣೆ ನಡೆಸಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಓದಿದರು. ಅಧ್ಯಕ್ಷ ಗಂಗಾಧರ ಕೊಳಗಿ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಪತ್ರಕರ್ತರಾದ ಗಣೇಶ ಭಟ್ಟ, ಸುಜಯ ಭಟ್ಟ, ಯಶವಂತ ತ್ಯಾರ್ಸಿ, ನಾಗರಾಜ ನಾಯ್ಕ ಮಾಳ್ಕೋಡ ಇದ್ದರು.