ಸಿದ್ದಾಪುರ : ತಾಲೂಕಿನ ದೊಡ್ಮನೆ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ ದೊಡ್ಮನೆ ಎಮ್.ಜಿ.ವಿ.ವಿ. ಪ್ರೌಢಶಾಲೆ ಸಭಾಂಗಣದಲ್ಲಿ ಸಮೂಹ ಸಂಪನ್ಮೂಲ ಕೇಂದ್ರ ದೊಡ್ಮನೆ ಮತ್ತು ಸ.ಹಿ.ಪ್ರಾ. ಶಾಲೆ ಬಳೂರು ಸಂಯುಕ್ತ ಸಂಘಟನೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ಜಿ. ಚಂದಾವರ ಉದ್ಘಾಟಿಸಿ ಯಾವ ಒಂದು ವ್ಯಕ್ತಿಯು ಕಾರ್ಯಕ್ರಮವನ್ನು ನಡೆಸಲು ಸಿದ್ಧನಾಗಿರುತ್ತಾನೋ ಅದಕ್ಕೆ ತಕ್ಕ ಬದ್ಧತೆಯನ್ನು ಕೂಡ ಹೊಂದಿರಬೇಕು ಬದ್ಧತೆಯಿಂದ ಪ್ರಯತ್ನ ಮಾಡಿದಾಗ ಪ್ರಬುದ್ಧತೆ ಬರುತ್ತದೆ, ಈ ಭಾಗದ ಇನ್ನಷ್ಟು ಪ್ರತಿಭೆಗಳು ಈ ಕಾರ್ಯಕ್ರಮದ ಮೂಲಕ ಹೊರಹೊಮ್ಮಲಿ ಎಂದರು.
ಬಳೂರು ಎಸ್.ಡಿ.ಎಮ್.ಸಿ ಅದ್ಯಕ್ಷ ವೀರಭದ್ರ ಗೌಡ ಅದ್ಯಕ್ಷತೆ ವಹಿಸಿ ಈ ವರ್ಷದ ಕಾರ್ಯಕ್ರಮ ಆಯೋಜನಗೆ ನಮಗೆ ಅವಕಾಶ ಸಿಕ್ಕಿರುವುದು ಖುಷಿಯ ಸಂಗತಿ, ಪ್ರತಿಭೆಗಳುಳ್ಳ ವಿದ್ಯಾರ್ಥಿಗಳ ಹೊರ ತರಲು ಪಾಲಕರು ಶಿಕ್ಷಕರ ಸಹಕಾರ ಅತೀ ಮುಖ್ಯ , ದೊಡ್ಮನೆ ಕ್ಲಸ್ಟರ್ ವ್ಯಾಪ್ತಿಯ ಜನರು ಈ ಕಾರ್ಯಕ್ರಮಕ್ಕೆ ತುಂಬು ಮನದ ತನು ಮನ ಧನ ಸಹಕಾರವನ್ನು ನೀಡಿದ್ದಾರೆ ಹೀಗೆ ಎಲ್ಲರೂ ಒಟ್ಟಾಗಿ ಬೆಂಬಲ ನೀಡಿದಾಗ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಸತೀಶ ಹೆಗಡೆ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯು ಹೊರಬರಲೆಂದು ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಆಯೋಜಿಸಿದೆ, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಇದೊಂದು ಉತ್ತಮ ಅವಕಾಶ ಈ ಕಾರ್ಯಕ್ರಮದ ಉಪಯೋಗ ಪಡೆದುಕೊಂಡು ಸಾಧನೆ ಮಾಡಿ ಎಂದರು. ನಿವೃತ್ತ ಶಿಕ್ಷಕ ಮಂಜುನಾಥ ಭಟ್ (ಗುರೂಜಿ) ಕಲ್ಲೆಮಕ್ಕಿ, ಆರ್.ಎಮ್. ಭಟ್, ದೊಡ್ಮನೆ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಫ್.ಎನ್. ಹರನಗಿರಿ, ವಿವಿಧ ಶಾಲೆಗಳ ಎಸ್.ಡಿ. ಎಮ್.ಸಿ. ಅದ್ಯಕ್ಷ ಕೃಷ್ಣಮೂರ್ತಿ ಭಟ್, ಕೃಷ್ಣಮೂರ್ತಿ ನಾಯ್ಕ, ಪದೋನ್ನತ ಮುಖ್ಯ ಶಿಕ್ಷಕ ಎಮ್. ಆಯ್. ಹೆಗಡೆ ಮತ್ತು ಲಕ್ಷ್ಮೀ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಭಾಸ್ಕರ ಮಡಿವಾಳ ಸ್ವಾಗತಿಸಿದರು. ಬಳೂರು ಶಾಲಾ ಮುಖ್ಯ ಶಿಕ್ಷಕ ಕುಮಾರ್ ಜಿ. ಎನ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಳೂರು ಶಾಲೆಯ ಸಹ ಶಿಕ್ಷಕಿ ಶೋಭಾ ಮಡಿವಾಳ ಮತ್ತು ಸೂರಗಾಲ ಶಿಕ್ಷಕರಾದ ಮಂಜುನಾಥ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಇಬ್ಬರು ಹಿರಿಯ ನಿವೃತ್ತ ಶಿಕ್ಷರು, ಮೂವರು ಪ್ರಶಸ್ತಿ ವಿಜೇತ ಶಿಕ್ಷರಿಗೆ, ಹಾಗೂ ದೊಡ್ಮನೆ ಕ್ಲಸ್ಟರ್ ನಿಂದ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡ ಒಂಬತ್ತು ಶಿಕ್ಷಕರಿಗೆ ಸನ್ಮಾನಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು. ನಂತರ ಮಕ್ಕಳಿಂದ ಕಂಠಪಾಠ, ದೇಶ ಭಕ್ತಿಗೀತೆ ಮುಂತಾದ 15 ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು . ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.