ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತಿಯ ಸಭಾ ಭವನದಲ್ಲಿ ಬುಧವಾರ ನೋಡಲ್ ಅಧಿಕಾರಿ ಭಾರತಿ ನಾಯಕ ಅಧ್ಯಕ್ಷತೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ ಜರುಗಿತು.
2023-24 ನೇ ಆರ್ಥಿಕ ವರ್ಷದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವರದಿ ಮತ್ತು ಕಾಮಗಾರಿಗಳ ಲೆಕ್ಕ ಪತ್ರದ ಮಾಹಿತಿಯನ್ನು ಸಾಮಾಜಿಕ ಲೆಕ್ಕ ಪರಿಶೋಧನೆಯ ತಾಲೂಕು ಸಂಯೋಜಕಿ ಗೀತಾ ಮಂಡಿಸಿದರು.
14 ಮತ್ತು 15 ನೇ ಹಣಕಾಸು ಅನುದಾನದಡಿ ಕೈಗೊಳ್ಳಲಾದ ಕಾಮಗಾರಿ ವಿವರ ಮತ್ತು ಲೆಕ್ಕ ಪತ್ರಗಳ ಮಾಹಿತಿಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ತಳವಾರ ಮಂಡಿಸಿ, ಗ್ರಾಮಸ್ಥರ ಪ್ರಶ್ನೆ, ಗೊಂದಲ ಮತ್ತು ಅಹವಾಲುಗಳನ್ನು ಆಲಿಸಿ, ಸಮರ್ಪಕವಾಗಿ ಉತ್ತರಿಸಿದರು. ಬಳಿಕ ವೈಯಕ್ತಿಕ ಕಾಮಗಾರಿ ಬೇಡಿಕೆಯನ್ನು ಪಡೆದುಕೊಂಡರು.
ಮಹಾತ್ಮ ಗಾಂಧಿ ನರೇಗಾ ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಹಾಗೂ ತಾಲೂಕು ತಾಂತ್ರಿಕ ಸಂಯೋಜಕ ಅನಿಲ್ ಗಾಯತ್ರಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕುರಿ, ಕೋಳಿ, ಜಾನುವಾರು ಕೊಟ್ಟಿಗೆ, ಕೃಷಿ ಬಾವಿ, ಕೊಳವೆಬಾವಿ ಮರುಪೂರಣ ಘಟಕ ಮತ್ತು ಬಚ್ಚಲು ಗುಂಡಿ ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳು ಮತ್ತು ಕೆರೆ, ಹಳ್ಳ ಹೂಳೆತ್ತೆವುದು, ಪುನಶ್ಚೇತನ, ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ಸೇರಿದಂತೆ ವಿವಿಧ ಸಾಮೂಹಿಕ ಕಾಮಗಾರಿಗಳ ಬಗ್ಗೆ ವಿಸ್ತೃತವಾಗಿ ವಿವರಿಸಿ, ಯೋಜನೆಯಡಿ ಇರುವ ವಿಫುಲ ಅವಕಾಶಗಳ ಕುರಿತು ತಿಳಿ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಕೈಗಳಿಗೆ ಕನಿಷ್ಠ 100 ದಿನಗಳ ಕೆಲಸ ಒದಗಿಸಿ, ಗಂಡು – ಹೆಣ್ಣಿಗೆ ಸಮಾನ ವೇತನ ನೀಡಿ, ಸ್ಥಳೀಯವಾಗಿ ಜನೋಪಯೋಗಿ ಆಸ್ತಿ ಸೃಜಿಸುವುದಕ್ಕೆಂದೆ ಇರುವ ಮನರೇಗಾ ಯೋಜನೆಯನ್ನು ಅರ್ಹ ಫಲಾನುಭವಿಗಳು ಸರಿಯಾಗಿ ಬಳಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಜಗನ್ನಾಥ ನಾಯ್ಕ, ಉಪಾಧ್ಯಕ್ಷೆ ಶೋಭಾ ಗೋವಿಂದ ಆಗೇರ, ಸರ್ವ ಸದಸ್ಯರು, ತಾಂತ್ರಿಕ ಸಹಾಯಕರು, ಪಂಚಾಯತ್ ಸಿಬ್ಬಂದಿ, ಕೂಲಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.