ಸಿದ್ದಾಪುರ: ತಾಲೂಕಿನ ಕಾನಸೂರಿನ ಯಕ್ಷಪ್ರೇಮಿ ದಿ. ನಾಗೇಶ ಶೇಟರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಸಂತೋಷಶೇಟರ ಪ್ರಾಯೋಜಕತ್ವದಲ್ಲಿ ಏರ್ಪಟ್ಟ ತಾಳಮದ್ದಳೆ “ಅಂಗದ-ಸಂಧಾನ” ಮನೋಜ್ಞವಾಗಿ ಮೂಡಿಬಂತು.
ನಾಟ್ಯಾಚಾರ್ಯ ಶಂಕರ ಭಟ್ಟರ ಅಂಗದ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪರವರ ರಾವಣ ಇವರಿಬ್ಬರ ಸಂವಾದ ವಿಶೇಷ ಆಕರ್ಷಣೆಯಾಯಿತು. ಉಮಾಕಾಂತ ಹೆಗಡೆ ಮಾದನಕಳ್‌ರವರ ರಾಮ, ಚಂದ್ರಶೇಖರ ಹೆಗಡೆ ಮಾದನಕಳ್ ರವರ ಸುಗ್ರೀವ, ರತ್ನಾಕರ ಭಟ್ ಕಾನಸೂರ್ ರವರ ಪ್ರಹಸ್ತ ರಂಜನೆ ನೀಡಿದವು.
ಹಿಮ್ಮೇಳದಲ್ಲಿ ಗಣಪತಿ ಹೆಗಡೆ ಕಲ್ಲಳ್ಳಿಯವರ ಭಾಗವತಿಕೆ, ಶ್ರೀಪತಿ ಹೆಗಡೆ ಕಂಚಿಮನೆಯವರ ಮದ್ದಳ ಸಾತ್ ಕಾರ್ಯಕ್ರಮಕ್ಕೆ ಕಳೆಯೇರಿಸಿದವು. ಸಂತೋಷ ಸಿಗಂದೂರ್ ಹಾಗೂ ಗಣೇಶ ಶೇಟ್ ಕಾನಸೂರು ಕಲಾವಿದರನ್ನು ಗೌರವಿಸಿದರು.