ವಿಶೇಷ ಅಧಿಕಾರಿ ನೇಮಕ ಆದೇಶ ಮಾತ್ರ ರದ್ದು | ಡಿಆರ್ ಕೋರ್ಟ್ ಆದೇಶದಂತೆ ಚುನಾವಣಾ ಪ್ರಕ್ರಿಯೆ ನಡೆಸಲು ಮನವಿ
ಶಿರಸಿ: ಇತ್ತಿಚಿಗಷ್ಟೇ ಹೊರಬಿದ್ದಿರುವ ಮೇಲ್ಮನವಿ ಆದೇಶದಲ್ಲಿ ಸಂಸ್ಥೆಗೆ ವಿಶೇಷಾಧಿಕಾರಿ ನೇಮಕಕ್ಕೆ ಮಾತ್ರ ರದ್ದಾಗಿದ್ದು, ಅಧ್ಯಕ್ಷರನ್ನು ಒಳಗೊಂಡಂತೆ ಟಿಎಸ್‌ಎಸ್ ಸಂಸ್ಥೆಯ ಹಾಲಿ ಆಡಳಿತ ಮಂಡಳಿಗೆ, ಆಡಳಿತ ನಡೆಸಲು ಯಾವುದೇ ಅಧಿಕಾರವಿಲ್ಲ. ಈ ವಿಷಯ ಸಂಘದ ಪ್ರಭಾರಿ ವ್ಯವಸ್ಥಾಪಕರಿಗೆ ಗೊತ್ತಿದ್ದರೂ ಅವರ ಜತೆ ಶಾಮೀಲಾಗಿ ಸಂಘದಲ್ಲಿ ಕರ್ತವ್ಯ ಲೋಪ ಎಸಗುತ್ತಿರುವ ಕುರಿತು ಸಂಘದ ಕೆಲ ಷೇರು ಸದಸ್ಯರು ಆರೋಪಿಸಿ, ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಷೇರು ಸದಸ್ಯ ಶ್ರೀಪಾದ ಹೆಗಡೆ ಕಡವೆ ನೇತೃತ್ವದಲ್ಲಿ ಸೋಮವಾರ ಟಿ.ಎಸ್.ಎಸ್. ಪ್ರಭಾರಿ ವ್ಯವಸ್ಥಾಪಕ ಗಿರೀಶ ಹೆಗಡೆ ಅವರಿಗೆ ಶೇರು ಸದಸ್ಯರು ಮನವಿ ನೀಡಿದರು. ಸಂಘದಲ್ಲಿ 20/08/2023 ರಂದು ಚುನಾವಣೆ ಜರುಗಿದ್ದು, ಚುನಾವಣೆಯಲ್ಲಿ ಲೋಪ ನಡೆದಿದೆ ಮತ್ತು ಚುನಾವಣೆಯು ಕಾಯ್ದೆ ಬಾಹಿರವಾಗಿ ಜರುಗಿದ ಕುರಿತು ಕೆಲವು ಸದಸ್ಯರು ಕಾರವಾರದ ಉಪನಿಬಂಧಕರು ಸಹಕಾರ ಸಂಘ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ನ್ಯಾಯಾಲಯವು ಈ ದಾವೆಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ 20/08/2023 ರಂದು ಜರುಗಿದ ಚುನಾವಣೆಯ ಫಲಿತಾಂಶವನ್ನು ರದ್ದು ಪಡಿಸಿ 24/05/2024 ರಂದು ಆದೇಶ ನೀಡಿದೆ ಮತ್ತು ಸಂಘಕ್ಕೆ ಉಂಟಾಗುವ ಆಡಳಿತಾತ್ಮಕ ಶೂನ್ಯತೆ ನಿವಾರಣೆಗೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು.
ಆದರೆ ಸಂಘಕ್ಕೆ ವಿಶೇಷ ಅಧಿಕಾರಿ ನೇಮಕ ಮಾಡಿದ ಕುರಿತು ಸಂಯುಕ್ತ ನಿಬಂಧಕರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಈ ಮೇಲ್ಮನವಿ ಅಂತಿಮವಾಗಿ 18/07/2024 ರಂದು ಇತ್ಯರ್ಥವಾಗಿದೆ. ಈ ಮೇಲ್ಮನವಿ ಆದೇಶದಲ್ಲಿ ವಿಶೇಷ ಅಧಿಕಾರಿ ನೇಮಕದ ಆದೇಶವನ್ನು ರದ್ದು ಪಡಿಸಿದ್ದಾರೆ. ಆದರೆ, 20/08/2023 ರಂದು ಆಯ್ಕೆಯಾದ ಆಡಳಿತ ಮಂಡಳಿಗೆ ಮುಂದುವರಿಯುವ ಯಾವುದೇ ಆದೇಶ ಇಲ್ಲ. ಕಾರವಾರದ ಉಪ ನಿಬಂಧಕ ಸಹಕಾರ ಸಂಘಗಳ ನ್ಯಾಯಾಲಯ ನೀಡಿದ್ದ ಆದೇಶದ ಕುರಿತು ಕೆಎಟಿಯಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಕೋರಿದ್ದ ಅರ್ಜಿ 09/08/2024ರಂದು ತಿರಸ್ಕೃತವಾಗಿದ್ದು, ಆದ್ದರಿಂದ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರಿಗೆ ಮತ್ತು ಆಡಳಿತ ಮಂಡಳಿಗೆ ಅಧಿಕಾರ ಇಲ್ಲ. ಈ ವಿಷಯ ಗೊತ್ತಿದ್ದೂ ಅವರ ಜೊತೆಗೆ ಶಾಮೀಲಾಗಿ ಸಂಘದಲ್ಲಿ ಕರ್ತವ್ಯ ಲೋಪ ಎಸಗುತ್ತಿದ್ದಿರಿ. ಆಡಳಿತ ಮಂಡಳಿ ಸದಸ್ಯರು ತಾವು ಸಂಘದ ಪಧಾಧಿಕಾರಿಗಳು ಅಲ್ಲದಿದ್ದರೂ ಜನರಿಗೆ ತಾವೇ ಅಧಿಕಾರದಲ್ಲಿ ಮುಂದುವರಿದಿದ್ದೇವೆ ತಮ್ಮ ಅಧಿಕಾರ ಅವಧಿ ಮುಂದುವರಿದಿದೆ ಎಂದು ತಪ್ಪು ಸಂದೇಶ ನೀಡುತ್ತ ಮೋಸ, ವಂಚನೆ ಮಾಡುತ್ತಿದ್ದಾರೆ. ಸಹಕಾರ ಸಂಘಗಳ ಕಾಯಿದೆ 109 (11) ರ ಅನ್ವಯ ಅಪರಾಧ ಮಾಡಿದ್ದಾರೆ. ಕಾರಣ, ಸಂಘದಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷ ಮತ್ತು ಆಡಳಿತ ಮಂಡಳಿ ಸೂಕ್ತ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ಜೊತೆಗೆ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ ಪ್ರಜಾಸತ್ತಾತ್ಮಕ ಆಡಳಿತ ಮಂಡಳಿ ರಚನೆಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ತಪ್ಪಿದ್ದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ಷೇರು ಸದಸ್ಯರಾದ ಶ್ರೀಪಾದ ಹೆಗಡೆ ಕಡವೆ, ಪ್ರಶಾಂತ ಹೆಗಡೆ ಕಲಗದ್ದೆ, ವಿನಾಯಕ ಭಟ್ಟ ಗೋಳಿಕೊಪ್ಪ, ಎಂ.ಜಿ.ಭಟ್ಟ ಬೆಳಖಂಡ, ಕುಮಾರ ಜೋಶಿ ಸೋಂದಾ, ವಿನಯ ಹೆಗಡೆ ಕೆಂಚಗದ್ದೆ ಮತ್ತಿತರರು ಇದ್ದರು.