“ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ| ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂ ವರಃ”||
ಭಾವಾರ್ಥ:
ದೇವಾಸುರರ ಸಂಗ್ರಾಮದಲ್ಲಿ ಎಂದಿಗೂ ಹಿಂಜರಿಯುವ ದಿಲ್ಲ,ಆದ್ದರಿಂದ ‘ಅನಿವರ್ತೀ’ಎನಿಸುವನು ಅಥವಾ ವೃಷ(ಧರ್ಮ) ಪ್ರಿಯನಾಗಿರುವದರಿಂದ ಧರ್ಮವನ್ನು ಬಿಟ್ಟು ಹಿಂಜರಿಯುವದಿಲ್ಲವಾದ್ದರಿಂದ ‘ಅನಿವರ್ತೀ’ ಎಂದಾಗಬಹುದು. ಸ್ವಭಾವದಿಂದಲೇ ವಿಷಯಗಳಿಂದ ಹಿಂತಿರುಗಿದ ಮನಸ್ಸುಳ್ಳಾತನು,ಆದ್ದರಿಂದ ‘ನಿವೃತ್ತಾತ್ಮನು’. ಬಿಡಿಬಿಡಿಯಾಗಿ ಹರಡಿಕೊಂಡಿರುವ ಜಗತ್ತನ್ನು ಸಂಹಾರ ಮಾಡಿ ಸೂಕ್ಷ್ಮ ರೂಪದಿಂದ ಸಂಕ್ಷೇಪಗೊಳಿಸುವದರಿಂದ ‘ಸಂಕ್ಷೇಪ್ತಾ’ ಎನಿಸುವವನು. ಸಂಪಾದಿಸಿಕೊಂಡದ್ದನ್ನು ಕಾಪಾಡಿಕೊಡುವನಾದ್ದರಿಂದ ‘ಕ್ಷೇಮಕೃತ್’ ಎಂದು ಹೆಸರು. ತನ್ನ ನಾಮವನ್ನು ಸ್ಮರಿಸಿದ ಮಾತ್ರದಿಂದ ಪವಿತ್ರಗೊಳಿಸುತ್ತನಾದ್ದರಿಂದ ‘ಶಿವನು’.(ಹರಿ ಹರರಲ್ಲಿ ಬೇಧ ವಿಲ್ಲ)ತನ್ನ ವಕ್ಷ ಸ್ಥಳದಲ್ಲಿ ‘ಶ್ರೀವತ್ಸ’ಎಂಬ ಭೃಗು ಮಹರ್ಷಿಯ ಪಾದದ ಚಿಹ್ನೆಯನ್ನು ಧರಿಸಿರುವವನು. ಆದ್ದರಿಂದ ‘ಶ್ರೀವತ್ಸವಕ್ಷನು’ ಎನಿಸಿದ್ದಾನೆ. ಈತನ ಎದೆಯ ಮೇಲೆ ಎಂದಿಗೂ ಅಗಲದೆ ಶ್ರೀಯು ವಾಸವಾಗಿರುತ್ತಾಳೆ. ಆದ್ದರಿಂದ ‘ಶ್ರೀವಾಸನು’. ಅಮೃತಮಥನ ಸಮಯದಲ್ಲಿ ಸುರಾಸುರರೆಲ್ಲರನ್ನು ಬಿಟ್ಟು ಶ್ರೀಯು ಈತನನ್ನು ಪತಿಯಾಗಿ ವರಿಸಿದಳು.ಆದ್ದರಿಂದ ಈತನು ‘ಶ್ರೀಪತಿ’ಯು.ಅಥವಾ ಶ್ರೀ ಎಂದರೆ ಪರಾಶಕ್ತಿಯು. ಆ ಶಕ್ತಿಗೆ ಪತಿಯಾದ್ದರಿಂದ ‘ಶ್ರೀಪತಿ’ಯು ಈತನ ಪರಾಶಕ್ತಿಯು ವಿಧವಿಧವಾದ ಎಂದೇ ಶ್ರುತವಾಗಿದೆ ಎಂಬ ಶ್ರುತಿಯು ಇಲ್ಲಿ ಪ್ರಮಾಣ.ಶ್ರೀ ಸಂಪನ್ನರಲ್ಲಿ ಶ್ರೇಷ್ಠನಾಗಿರುವವನು.ಋಗ್ವೇದ, ಯಜುರ್ ಮತ್ತು ಸಾಮ ವೇದಗಳು ಇವುಗಳ ಜ್ಞಾನವುಳ್ಳವರಲ್ಲಿ ಶ್ರೇಷ್ಠನು.ವೇದಾಧ್ಯಾಯಿಗಳನ್ನು ಹಾಗೂ ವೇದಾಂತ ಮಾರ್ಗಿಗಳನ್ನು ವರ ನೀಡುವವನು ಅಥವಾ ಆಶೀರ್ವದಿಸುವವನು. ಆದ್ದರಿಂದ ‘ಶ್ರೀಮತಾಂವರನು’.
ಮೇಲಿನ ಸ್ತೋತ್ರವು ವಿಶಾಖ ನಕ್ಷತ್ರದ 4ನೇ ಪಾದದವರು ಪ್ರತಿನಿತ್ಯ 11 ಬಾರಿ ಹೇಳಿಕೊಳ್ಳುವ ಸ್ತೋತ್ರವಾಗಿದೆ. ಮಕ್ಕಳು ದೂರದೇಶದಲ್ಲಿ ಇದ್ದಾಗ ಅವರ ಯೋಗ ಕ್ಷೇಮದ ಬಗ್ಗೆ ಹೆತ್ತವರಿಗೆ ,ಪಾಲಕರಿಗೆ ಚಿಂತೆಯಾಗುತ್ತದೆ. ಹಾಗೆ ಹೊರಗೆ ಕೆಲಸಕ್ಕೆ ಹೋಗಿರುವ ಪತಿಯ ಬಗ್ಗೆ ಪತ್ನಿಗೆ ಮತ್ತು ಪತ್ನಿಯ ಬಗ್ಗೆ ಪತಿಗೆ ಚಿಂತೆ ಆಗುತ್ತಿರುತ್ತದೆ. ಹಾಗೆ ದೂರದಲ್ಲಿ ಇರುವ ವಯಸ್ಸಾದ ತಂದೆ ತಾಯಿಯ ಬಗ್ಗೆ, ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಬಗ್ಗೆ ಹಾಗೆ ಶಿಕ್ಷಣ ಅಥವಾ ಉದ್ಯೋಗ ದ ಬಗ್ಗೆ ಹೊರ ಹೋಗಿರುವ ಸಹೋದರ ಸಹೋದರಿಯರ ಬಗ್ಗೆ ಇಡೀ ಕುಟುಂಬದ ಬಗ್ಗೆ ಹಿತ ಚಿಂತನೆ ಮಾಡುತ್ತಿರುವ ಎಲ್ಲರ ಯೋಗಕ್ಷೇಮಕ್ಕೆ ಹೇಳಿಕೊಳ್ಳಬಹುದಾದ ಶ್ಲೋಕ ವು ಇದಾಗಿರುತ್ತದೆ.
(ಸಂ:-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ)