ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ಸಭಾಭವನಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕಾರವಾರರವರ ಸೂಚನೆ ಹಾಗೂ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿರವರ ಆದೇಶದ ಮೇರೆಗೆ ಅತಿವೃಷ್ಟಿ ಹಾನಿಯ ಕುರಿತು ವಿಶೇಷ ಗ್ರಾಮ ಸಭೆ ನಡೆಯಿತು.
ಗ್ರಾಮ ಸಭೆಯಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹಮ್ಮದ್ ಹನೀಫ್ ಅತಿವೃಷ್ಟಿ ಹಾನಿಯಲ್ಲಿ ಯಾವ ಯಾವ ಸಮಸ್ಯೆಗಳ ವಿಷಯಗಳು ಇರುತ್ತವೆ ಎಂಬುದರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ನಡೆದ ಚರ್ಚೆಯಲ್ಲಿ ಮನೆ ಕಟ್ಟಡ ಹಾನಿ, ಕೊಟ್ಟಿಗೆ, ಜಾನುವಾರುಗಳಿಗೆ ಹಾನಿ, ಅಂಗನವಾಡಿ ಕೇಂದ್ರದ, ಶಾಲಾ ಕಟ್ಟಡಗಳ ಬಗ್ಗೆ, ಶಾಲಾ, ಅಂಗನವಾಡಿ ಅಕ್ಕಪಕ್ಕ ಅಪಾಯಕಾರಿ ಸಂದರ್ಭಗಳು ಇದ್ದರೆ, ರಸ್ತೆ ಬದಿಯಲ್ಲಿ ಹಾನಿ, ರಸ್ತೆ ಕೊಚ್ಚಿಕೊಂಡು ಹೋದ ಬಗ್ಗೆ, ಬೆಳೆ ಹಾನಿ, ಅಡಿಕೆ ಕೊಳೆ ರೋಗ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆದು ಇವುಗಳ ಬಗ್ಗೆ ಕೈಗೊಳ್ಳಬಹುದಾದ ತಾತ್ಪೂರ್ತಿಕ ಪರಿಹಾರ ಮತ್ತು ಹೆಚ್ಚಿನ ಸಮಸ್ಯೆಗಳ ಪರಿಹಾರಕ್ಕೆ ತಹಶೀಲ್ದಾರ್ ಹಾಗೂ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿಯನ್ನು ಕಳಿಸುವ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಯಿತು. ಸಭೆಯಲ್ಲಿ ಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯಾದ ವಿಜಯಾ ನಾಯ್ಕ ಡೆಂಗ್ಯೂ ಜ್ವರದ ಮಾಹಿತಿ, ಲಕ್ಷಣಗಳ ಬಗ್ಗೆ, ಮುಂಜಾಗ್ರತೆ ಕ್ರಮಗಳ ಬಗ್ಗೆ,ಚಿಕಿತ್ಸೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಈ ಸಭೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ ದೇಸಾಯಿ, ಉಪಾಧಕ್ಷೆ ದಾಕ್ಷಾಯಣಿ ದಾನಶೂರ, ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಶೋಭಾ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ, ಲೆಕ್ಕಾಧಿಕಾರಿಗಳ ಸಹಾಯಕ, ಸ್ವಸಹಾಯ ಸಂಘದ ಭಾರತಿ ಹೆಗಡೆ,ಗ್ರಾಮ ಪಂಚಾಯತ ಮೇಲ್ವಿಚಾರಕ,ಅಂಗನವಾಡಿ ಕಾರ್ಯಕರ್ತೆಯರು,ಶಾಲಾ ಆಡಳಿತ ಮಂಡಳಿ ಸದಸ್ಯರು,ರೈತರು, ಸಾರ್ವಜನಿಕರು ಭಾಗವಹಿಸಿದ್ದರು.ಗ್ರಾಮ ಪಂಚಾಯತ ಕಾರ್ಯದರ್ಶಿಯಾದ ಗಜಾನನ ಸಾವರ್ಕರ್ ಸ್ವಾಗತಿಸಿ ವಂದಿಸಿದರು, ಪಂಚಾಯತ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.