ಭಟ್ಕಳ: ತಾಲೂಕಿನ ಬೆಳ್ನಿ ದೊಡ್ಡಯ್ಯನಮನೆಯ ಮಂಜಪ್ಪ ಮೊಗೇರ್ ಮಗನ ಮದುವೆಗಾಗಿ 5 ಲಕ್ಷ ರೂ.ಸಾಲ ಮಾಡಿದ್ದು, ಮದುವೆಗೂ ಮುನ್ನವೇ ತೀರಿಸುವುದಾಗಿ ಒಪ್ಪಿಕೊಂಡಿದ್ದರು. ಆದರೆ ಮಂಜಪ್ಪ ಅವರ ಮಗ ರಮೇಶ ಇದೀಗ ಸಾಲಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದು, ಸಾಲ ತೀರಿಸು ಎಂದು ಬುದ್ದಿ ಹೇಳಿದ ತಾಯಿಯ ಮೇಲೆ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ.
ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ 65 ವರ್ಷದ ಮಂಜಪ್ಪ ಮೊಗೇರ್ ತಮ್ಮ ಪತ್ನಿ ಹೆಸರಿನಲ್ಲಿದ್ದ ಭೂಮಿ ಅಡವಿಟ್ಟು ಸಾಲ ಪಡೆದಿದ್ದರು. ಮದುವೆ ಆದ ನಂತರ ಮಂಜಪ್ಪ ಅವರ ಮನೆಯಲ್ಲಿಯೇ ರಮೇಶನೂ ಪತ್ನಿ ಹಾಗೂ ಮಗುವಿನ ಜೊತೆ ವಾಸವಾಗಿದ್ದ. ಆದರೆ, ಸಾಲವನ್ನು ಮಾತ್ರ ತೀರಿಸಿರಲಿಲ್ಲ. ಸಾಲ ತೀರಿಸುವಂತೆ ಹೇಳಿದಾಗ ಅದೇ ಮನೆಯಲ್ಲಿ ಬೇರೆ ಅಡುಗೆ ಮಾಡಿಕೊಳ್ಳಲು ಶುರು ಮಾಡಿದ್ದ. ತಂದೆ-ತಾಯಿಗೆ ಅಗತ್ಯವಿರುವ ವಸ್ತುಗಳನ್ನೂ ಸಹ ಆತ ಕೊಡಿಸುತ್ತಿರಲಿಲ್ಲ.
ಹೀಗಿರುವಾಗ ಸಾಲ ಪಾವತಿಸುವಂತೆ ಬ್ಯಾಂಕಿನಿಂದ ನೋಟಿಸ್ ಬಂದಿದ್ದು, ಜುಲೈ 22ರಂದು ಸಾಲ ತೀರಿಸು ಎಂದು ಆತನ ತಾಯಿ ಬುದ್ದಿ ಹೇಳಿದ್ದಾರೆ. ಆಗ, ಸಿಟ್ಟಾದ ರಮೇಶ ತಾಯಿಗೆ ಬೈದು ಹಲ್ಲೆ ಮಾಡಿದ್ದು, ಆಕೆಯ ಎಡಗೈ ಮುರಿದಿದ್ದು, ಮುಖಕ್ಕೆ ಸಹ ಗಾಯವಾಗಿದೆ. ಈ ಬಗ್ಗೆ ಮಂಜಪ್ಪ ಮೊಗೇರ್ ಮಗನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.