ಶಿರಸಿ: ನೈಸರ್ಗಿಕವಾಗಿ ಹುಟ್ಟಿಕೊಂಡ ಹಳ್ಳ ಕೊಳ್ಳಗಳು ವರುಣನ ಆರ್ಭಟಕ್ಕೆ ಸಿಕ್ಕಿ ಮಳೆಗಾಲ ಮುಗಿಯುವ ಹೊತ್ತಿಗೆ ಕಸಕಡ್ಡಿಗಳು ಸಿಲುಕಿ ದಿಕ್ಕನ್ನೇ ಬದಲಿಸಿರುತ್ತವೆ. ಹೀಗಾಗಿ ಮಳೆಗಾಲ ಪ್ರಾರಂಭಕ್ಕೆ ಕಾಲುವೆಗಳ ದುರಸ್ತಿ ಕಾರ್ಯನಡೆಸಲಾಗುತ್ತಿದೆ.
ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿನ ಕೆರೆ, ಬಾವಿ, ಕಾಲುವೆಗಳನ್ನು ಅಭಿವೃದ್ಧಿಪಡಿಸಿ ನೀರಿನ ಮೂಲಗಳನ್ನು ಸಂರಕ್ಷಿಸಲಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಲುವೆಗಳನ್ನು ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯತ್ನ ಹನುಮಂತಿ ಗ್ರಾಮದಲ್ಲಿ 2ಲಕ್ಷ ವೆಚ್ಚದಲ್ಲಿ ಕಾಲುವೆ ನಿರ್ಮಿಸಲಾಗಿದೆ.
2023-24ನೇ ಸಾಲಿನಲ್ಲಿ ಕಾಲುವೆ ನಿರ್ಮಿಸಲಾಗಿದ್ದು, ಮಧ್ಯ ಗ್ರಾಮದ ಸುಮಾರು 4ಎಕರೆ ವಿಸ್ತೀರ್ಣದಲ್ಲಿ ಇರುವ ಕೆರೆಯ ಸುತ್ತ ತಲಾ 1ಮೀ ಆಳ ಹಾಗೂ ಅಗಲ ಇರುವಂತೆ ನಿರ್ಮಿಸಲಾಗಿದೆ. ಈ ಕಾಲುವೆ ವಿಸ್ತೀರ್ಣ ಸುಮಾರು 1ಕೀ.ಮೀ ಹೆಚ್ಚಿನ ವ್ಯಾಪ್ತಿ ಹೊಂದಿದ್ದು ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರು ನದಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗಿದೆ.
ಕಾಲುವೆ ನಿರ್ಮಾಣದಿಂದಾಗಿ ನೀರು ಸರಾಗವಾಗಿ ನದಿ ಕೋಡಿಯನ್ನು ಸೇರಬಹುದಾಗಿದೆ. ಇನ್ನೂ ಸುತ್ತಲಿನ ಕೂಲಿಕಾರರಿಗೆ ಉದ್ಯೋಗ ಸೃಷ್ಟಿ. ಕೆರೆಯ ನೀರು ಕಲುಷಿತವಾಗದಂತೆ ತಡೆಯಲು ಸಹಾಯಕವಾಗಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ತಿಳಿಸಿದರು.